ಶಿರಸಿ : ತಾಲೂಕಿನಾದ್ಯಂತ ಸಂಜೆ ಸುರಿದ ಭಾರಿ ಮಳೆ ಗಾಳಿಗೆ 50ಕ್ಕೂ ಹೆಚ್ಚು ಮರಗಳು ಧರೆಗುರುಳಿ, 20ಕ್ಕೂ ಹೆಚ್ಚು ಮನೆಗಳಿಗೆ ಹಾನಿಯಾದ ಘಟನೆ ನಡೆದಿದೆ. ಇನ್ನು ಬಹುತೇಕ ಕಡೆ ವಿದ್ಯುತ್ ವ್ಯತ್ಯಯ ಉಂಟಾಗಿದೆ.
ಭಾನುವಾರ ಸಂಜೆ 4.30 ರಿಂದ ಆರಂಭಗೊಂಡ ಮಳೆಯ ಜತೆ ಭಾರೀ ಗಾಳಿ ಬೀಸಿದ ಪರಿಣಾಮ ನಗರದ ವಿಕಾಸಾಶ್ರಮ ಮೈದಾನ, ಮರಾಠಿಕೊಪ್ಪ ಸರ್ಕಲ್, ರೋಟರಿ ಆಸ್ಪತ್ರೆ ಪಕ್ಕ, ಮಾರಿಕಾಂಬಾ ಪ್ರೌಢಶಾಲೆ, ಕೋರ್ಟ್ ಆವಾರ, ಕೋಟೆಕೆರೆ, ನಿಲೇಕಣಿ, ಗಾಂಧಿನಗರ ಸೇರಿದಂತೆ ಹಲವೆಡೆ ಮರಗಳು ಬಿದ್ದಿವೆ. ಗ್ರಾಮೀಣ ಭಾಗದಲ್ಲಿ ಸುರಿದ ಮಳೆ ಕೆಲ ಕಾಲ ಎಲ್ಲರನ್ನೂ ಆತಂಕ ಉಂಟಾಗುವಂತೆ ಮಾಡಿತ್ತು.
ಗಾಂಧಿನಗರದಲ್ಲಿ ನಾಗೇಶ ನಾಯ್ಕ ಎಂಬುವವರಿಗೆ ಸೇರಿದ ಮನೆಯ ಮೇಲೆ ಮಾವು ಹಾಗೂ ತೆಂಗಿನ ಮರ ಬಿದ್ದ ಪರಿಣಾಮ ಮನೆಯೊಳಗಿದ್ದ ಇಬ್ಬರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ತಕ್ಷಣ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ನೀಡಲಾಗಿದೆ. ಕೋಟೆಗಲ್ಲಿಯಲ್ಲಿ ಕೂಡ ಮನೆಯ ಮೇಲೆ ಮರ ಬಿದ್ದು, ಛಾವಣಿಗೆ ಹಾನಿಯಾಗಿದೆ.
ನೆಹರು ನಗರ, ಹೊಸಪೇಟೆ ರಸ್ತೆ ಸೇರಿದಂತೆ ಹಲವೆಡೆ ಮನೆ, ಅಂಗಡಿಗಳ ಮೇಲ್ಛಾವಣಿ ಗಾಳಿಗೆ ಹಾರಿಸಿಕೊಂಡು ಹೋಗಿ ಚೆಲ್ಲಾಪಿಲ್ಲಿಯಾಗಿವೆ. ನಗರದ ನಿಲೇಕಣಿ ಮೀನು ಮಾರುಕಟ್ಟೆ ಬಳಿ ಮರವೊಂದು ಮೀನು ಮಾರಾಟಗಾರ ಸುರೇಶ ಎಂಬುವವರಿಗೆ ಸೇರಿದ ವಾಹನದ ಮೇಲೆ ಬಿದ್ದ ಪರಿಣಾಮ ವಾಹನ ಜಖಂಗೊಂಡಿದೆ.