ಕಾರವಾರ: ಮನೆ ಎದುರಿನ ಗುಡ್ಡ ಕುಸಿದ ಪರಿಣಾಮ ಮನೆ ಬೀಳುವ ಆತಂಕದಲ್ಲಿ ಕುಟುಂಬವೊಂದು ನಿತ್ಯ ಮನೆ ಬಿಟ್ಟು ಎರಡು ಕಿ.ಮೀ. ದೂರದ ಶಾಲೆಯೊಂದಕ್ಕೆ ತೆರಳಿ ಆಶ್ರಯ ಪಡೆಯುತ್ತಿದ್ದು, ತಮಗೆ ಶಾಶ್ವತ ಇಲ್ಲವೆ ಪರ್ಯಾಯ ವ್ಯವಸ್ಥೆ ಕಲ್ಪಿಸುವಂತೆ ಇದೀಗ ಜಿಲ್ಲಾಡಳಿತಕ್ಕೆ ಮನವಿ ಮಾಡಿದ್ದಾರೆ.
ಕಾರವಾರ ತಾಲೂಕಿನ ಕೇರವಡಿ ಗ್ರಾಮದ ಖಾಂಡ್ಯಾಳಿಯ ಮಜಿರೆ ನಿವಾಸಿಯಾದ ಸುರೇಶ ರಾಮಾ ಪಾಗಿಯ ಕುಟುಂಬದವರು ಹಳ್ಳದ ತೀರದ ತಮ್ಮ ಸ್ವಂತ ಜಮೀನಿನಲ್ಲಿ ಮನೆ ಕಟ್ಟಿಕೊಂಡು ಕಳೆದ ಹಲವು ವರ್ಷಗಳಿಂದ ವಾಸ ಮಾಡುತ್ತಿದ್ದರು. ಆದರೆ ಮನೆ ಎದುರಿಗೆ ಹಳ್ಳವೊಂದು ಹರಿಯುತ್ತಿದ್ದು, ಇದೀಗ ಭಾರಿ ಮಳೆಗೆ ಮನೆ ಎದುರಿನ ಗುಡ್ಡ ಕುಸಿಯಲಾರಂಭಿಸಿದೆ. ಈಗಾಗಲೇ ಸಾಕಷ್ಟು ಪ್ರಮಾಣದಲ್ಲಿ ಮಣ್ಣು ಕುಸಿದು ನೀರುಪಾಲಾಗಿದ್ದು, ಇದೀಗ ಮನೆ ಕೂಡ ಕುಸಿಯುವ ಆತಂಕ ಎದುರಾಗಿದೆ.
ಈಗಾಗಲೇ ಕೆರವಡಿ ಗ್ರಾಮ ಪಂಚಾಯಿತಿ ಹಾಗೂ ತಹಶೀಲ್ದಾರ್ಗೆ ಮನವಿ ಮಾಡಲಾಗಿದೆ. ಗ್ರಾಮ ಪಂಚಾಯತಿಯಿಂದ ಮುನ್ನೆಚ್ಚರಿಕಾ ಕ್ರಮವಾಗಿ ಕುಟುಂಬದ ಸದಸ್ಯರಿಗೆ ಕೆರವಡಿ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯ ಕಾಳಜಿ ಕೇಂದ್ರ ತೆರೆದಿದ್ದಾರೆ. ಆದರೆ ಪ್ರತಿನಿತ್ಯ ರಾತ್ರಿ 2 ಕಿ.ಮೀ. ಕಾಲ್ನಡಿಗೆ ಮೂಲಕ ಶಾಲೆಗೆ ತೆರಳಬೇಕಾಗಿದೆ. ಈಗಿರುವ ಸ್ವಂತ ಜಮೀನು ನದಿ ಅಂಚಿನಲ್ಲಿರುವುದರಿಂದ ಎಲ್ಲಿ ಮನೆ ನಿರ್ಮಾಣ ಮಾಡಿದರೂ ಮತ್ತೆ ಕುಸಿಯುವ ಆತಂಕವಿದ್ದು, ಸದ್ಯ ನಮಗೆ ಪರ್ಯಾಯ ವ್ಯವಸ್ಥೆ ಕಲ್ಪಿಸಿ ಬಳಿಕ ಶಾಶ್ವತವಾಗಿ ನೆಲೆಸಲು ಕೆರವಡಿ ಗ್ರಾಮದಲ್ಲಿ ಸ್ಥಳಾವಕಾಶ ಕಲ್ಪಿಸುವಂತೆ ಜಿಲ್ಲಾಡಳಿಕ್ಕೆ ಮನವಿ ಮಾಡಿದ್ದಾರೆ.