ಶಿರಸಿ: ಉತ್ತರಕನ್ನಡ ಜಿಲ್ಲೆಯ ಒಂದೇ ಕುಟುಂಬದ 18 ಸದಸ್ಯರಿಗೆ ಕೋವಿಡ್ ಸೋಂಕು ತಗುಲಿದ್ದು, ಆತ್ಮಸ್ಥೆರ್ಯ ಹಾಗೂ ಒಗ್ಗಟ್ಟಿನಿಂದ ಪರಿಸ್ಥಿತಿ ಎದುರಿಸಿ ಈಗ ಎಲ್ಲರೂ ಗುಣಮುಖರಾಗಿದ್ದಾರೆ.
ಸಿದ್ಧಾಪುರ ತಾಲೂಕಿನ ಸರಕುಳಿ ಗ್ರಾಮದ ಲೋಕೇಶ್ವರ ರಾಮಚಂದ್ರ ಹೆಗಡೆ ಮನೆಯಲ್ಲಿ ಒಬ್ಬರಿಗೆ ಅನಾರೋಗ್ಯ ಕಾಣಿಸಿಕೊಂಡು ಪರೀಕ್ಷೆ ಮಾಡಿಸಿದಾಗ ಕೋವಿಡ್ ದೃಢಪಟ್ಟಿತ್ತು. ಸುಮಾರು 3 ರಿಂದ 27 ವರ್ಷದ ಎಲ್ಲ ವಯೋಮಾನದವರಿರುವ ಕುಟುಂಬದವರು ಸ್ವಯಂ ಪ್ರೇರಣೆಯಿಂದ ಕೋವಿಡ್ ಪರೀಕ್ಷೆ ಮಾಡಿಸಿದಾಗ ಉಳಿದ 17 ಜನರಿಗೂ ಸೋಂಕು ತಗುಲಿರುವುದು ದೃಢಪಟ್ಟಿತ್ತು. ಆದರೆ ಯಾರೂ ಸಹ ಧೃತಿಗೆಡದೆ ಒಗ್ಗಟ್ಟಿನಿಂದ ಸರ್ಕಾರದ ಹಾಗೂ ವೈದ್ಯಕೀಯ ನಿಯಮಗಳನ್ನು ಪಾಲಿಸಿ ಮನೆಯಲ್ಲಿಯೇ ಅಗತ್ಯವಿರುವ ಚಿಕಿತ್ಸೆ ಪಡೆದು ಗುಣಮುಖರಾಗಿದ್ದಾರೆ.
ಸೋಂಕು ಊರಿನಲ್ಲಿ ಹರಡದಂತೆ ಜಾಗ್ರತೆ ವಹಿಸಿ ಇಂದಿಗೂ ಮುಂದುವರೆದಿರುವ ಅವಿಭಕ್ತ ಕುಟುಂಬಗಳ ಒಗ್ಗಟ್ಟು ಹಾಗೂ ಸಾಮಾಜಿಕ ಕಳಕಳಿಗೆ ಸಾಕ್ಷಿಯಾಗಿದ್ದಾರೆ. ಇದೇ ವೇಳೆ ಎಲ್ಲರೂ ಸೇರಿ ಮನೆಗೆ ಕಟ್ಟಿದ್ದ ಸೀಲ್ಡೌನ್ ಪಟ್ಟಿ ಕಟ್ ಮಾಡಿ ಸಂಭ್ರಮಿಸಿದ್ದಾರೆ.
ಸೋಂಕಿಗೆ ಯಾರೂ ಹೆದರದೆ ಸರ್ಕಾರ ಹಾಗೂ ವೈದ್ಯಕೀಯ ನಿಯಮಾವಳಿ ಪಾಲಿಸುವ ಮೂಲಕ ಪರಿಸ್ಥಿತಿ ಎದುರಿಸಿ. ಕೋವಿಡ್ ಹೋಗಲಾಡಿಸುವಲ್ಲಿ ಸಹಕರಿಸಿ ಅಂತಾರೆ ಕುಟುಂಬದ ಹಿರಿಯ ಸದಸ್ಯ ಲೋಕೇಶ್ವರ ರಾಮಚಂದ್ರ ಹೆಗಡೆ.