ಉತ್ತರ ಕನ್ನಡ: ಸಮುದ್ರ ಮೀನುಗಾರಿಕೆಗೆ ತೆರಳಿದ ವೇಳೆ ಅಪರೂಪದ ಗೋಲ್ ಫಿಶ್ ಕಾರವಾರ ಮೀನುಗಾರರ ಬಲೆಗೆ ಬಿದ್ದಿದೆ. ಇದು 5.5 ಕೆಜಿ ತೂಕ ಹೊಂದಿದೆ. ಈ ಮೀನಿನಲ್ಲಿ ಅತಿ ಹೆಚ್ಚು ಔಷಧೀಯ ಗುಣಗಳಿರುವ ಕಾರಣ ಇದನ್ನು 'ಗೋಲ್ಡನ್ ಹೃದಯದ ಮೀನು' ಎಂದು ಕೂಡಾ ಕರೆಯಲಾಗುತ್ತದೆ. ಇದು ಅತ್ಯಂತ ದುಬಾರಿ ಮೀನು ಕೂಡಾ ಹೌದು.
ಇದಕ್ಕೆ 1 ಕೆಜಿಗೆ 12 ಸಾವಿರ ರೂ.ವರೆಗೂ ಬೆಲೆ ಇದೆ. ಈ ಮೀನಿನಲ್ಲಿ ಗಾಳಿ ತುಂಬುವ ಚೀಲದಂತೆ ಅಂಗವೊಂದಿದೆೆ. ಇದನ್ನು ಔಷಧ ತಯಾರಿಕೆಗಾಗಿ ಬಳಸಲಾಗುತ್ತದೆ. ಬಿಯರ್ ಮತ್ತು ವೈನ್ ತಯಾರಿಕೆಯಲ್ಲಿ ಮೀನಿನ ಚೀಲ ಬಳಕೆಯಾಗುತ್ತದೆ.
''ಸಾಮಾನ್ಯವಾಗಿ ಈ ಮೀನು ನಮ್ಮ ದೇಶದ ಕೆಲವು ಕಡೆಗಳಲ್ಲಿ ಕಾಣ ಸಿಗುತ್ತದೆ. ಗುಜರಾತ್, ಮಹಾರಾಷ್ಟ್ರದ ಕಡಲತೀರದಲ್ಲಿ ಹೆಚ್ಚಾಗಿ ದೊರೆಯುತ್ತದೆ. ಈ ಹಿಂದೆ ಕೆಲವು ಬಡ ಮೀನುಗಾರರಿಗೆ ಈ ಮೀನು ದೊರೆತಿದ್ದು ಅದೃಷ್ಟ ಖುಲಾಯಿಸಿದ್ದೂ ಇದೆ. ಹೊರ ದೇಶಗಳಿಗೂ ರಫ್ತು ಮಾಡುವ ಕಾರಣ ಹೆಚ್ಚು ಬೇಡಿಕೆ ಇದೆ'' ಎಂದು ಕಡಲ ಜೀವಶಾಸ್ತ್ರಜ್ಞ ಶಿವಕುಮಾರ್ ಹರಗಿ ಮಾಹಿತಿ ನೀಡಿದರು.
ಇದನ್ನೂ ಓದಿ: ಮಲ್ಪೆ ಮೀನುಗಾರರ ಬಲೆಗೆ ಬಿದ್ದ 16 ಕೆಜಿ ತೂಕದ ಬಂಗಾರ ಬಣ್ಣದ ಮೀನು- ವಿಡಿಯೋ
ಬಂಗಾರ ಬಣ್ಣದ ಮೀನು: ಉಡುಪಿಯ ಮಲ್ಪೆ ಕಡಲ ತೀರದಲ್ಲಿ ಒಂದು ತಿಂಗಳ ಹಿಂದಷ್ಟೇ ಅಪರೂಪದ ಬಂಗಾರ ಬಣ್ಣದ ಮೀನು ಸೆರೆಸಿಕ್ಕಿತ್ತು. ಅಂಜಲ್ ಮೀನು ಇದಾಗಿದ್ದು ಸುಮಾರು 16 ಕೆಜಿ ಗಾತ್ರವಿದೆ. ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದಾಗ ಮೀನುಗಾರರ ಬಲೆ ಸೇರಿದೆ. ಕೆ.ಜಿಗೆ 600 ರೂ.ಯಂತೆ ಮಲ್ಪೆಯ ಸುರೇಶ್ ಎಂಬುವವರು 9,600 ರೂಪಾಯಿ ಕೊಟ್ಟು ಖರೀದಿಸಿದ್ದಾರೆ. ಈ ಜಾತಿಯ ಮೀನು ಹೆಚ್ಚಾಗಿ ಅಟ್ಲಾಂಟಿಕ್ ಸರೋವರದಲ್ಲಿ ಕಂಡುಬರುತ್ತದಂತೆ. ಪ್ರಾಕೃತಿಕ ಬದಲಾವಣೆ ಇಲ್ಲವೇ ಆನುವಂಶಿಕ ಕಾರಣದಿಂದಾಗಿ ಇವುಗಳ ಮೈಬಣ್ಣ ಬಂಗಾರದಂತಿರಲು ಸಾಧ್ಯವಿದೆ ಎನ್ನುತ್ತಾರೆ ತಜ್ಜರು.
ಇದನ್ನೂ ಓದಿ: ಕಲಬುರಗಿಯಲ್ಲಿ ವಿಚಿತ್ರ ದೈತ್ಯ ಮೀನು ಪತ್ತೆ: 'ಈಲ್' ರೀತಿಯ ಮೈಬಣ್ಣ, ಮೈಕಟ್ಟು
ದೈತ್ಯ ಗಾತ್ರದ ಮೀನು: ಕಲಬುರಗಿ ಜಿಲ್ಲೆಯ ಚಿಂಚೋಳಿ ತಾಲೂಕಿನ ನಾಗರಾಳ ಜಲಾಶಯದಲ್ಲಿ ನೋಡಲು ಅಪರೂಪದ ದೈತ್ಯ ಗಾತ್ರದ ಮೀನು ಈ ಹಿಂದೊಮ್ಮೆ ದೊರೆತಿತ್ತು. ಇದು ಯುರೋಪ್, ನ್ಯೂಜಿಲ್ಯಾಂಡ್‌ಗಳಂತಹ ದೇಶಗಳಲ್ಲಿ ಹೆಚ್ಚು ಕಂಡುಬರುವ 'ಈಲ್ ಮೀನು' ಮಾದರಿಯನ್ನು ಹೋಲುತ್ತಿದ್ದು ಕೂತೂಹಲ ಮೂಡಿಸಿತ್ತು. ಅಪರೂಪದ ಮೀನು ಕಂದು ಮೈಬಣ್ಣ ಹೊಂದಿದೆ. ಸುಮಾರು 6 ಅಡಿ ಉದ್ದ 13 ಕೆ.ಜಿ ತೂಕವಿದೆ. ಮೀನುಗಾರ ಈಶ್ವರ್ ಎಂಬುವರ ಬಲೆಗೆ ಬಿದ್ದಿದೆ. ದೇಹದಲ್ಲಿ ಮುಳ್ಳುಗಳಿಲ್ಲ. ಇದೊಂದು ಅಪರೂಪದ ಮೀನೆಂದು ತಿಳಿಯದೆ ಸಾಮಾನ್ಯ ಮೀನಿನಂತೆ ಕತ್ತರಿಸಿ ಮಾರಾಟ ಮಾಡಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ: ಹಿಮಪದರುಗಳ ಚಲನೆಗೂ ಸಮುದ್ರಮಟ್ಟ ಏರುವಿಕೆಗೂ ಸಂಬಂಧವಿದೆ: ಸಂಶೋಧನೆಯಲ್ಲಿ ಬಹಿರಂಗ