ಭಟ್ಕಳ: ಕೋಟೆ ಶ್ರೀ ವೀರಾಂಜನೇಯ ಕ್ಷೇತ್ರದ ಹೊಗೆವಡ್ಡಿ ನವಚೇತನ ಚಾರಿಟೇಬಲ್ ಟ್ರಸ್ಟ್ ರಾಮನಗರ, ಟೊಯೊಡ್ ಗೋಸ್ಕರ್ ಸೌತ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಬಿಡದಿ, ಮಾರುತಿ ಮೆಡಿಕಲ್ಸ್ ಬೆಂಗಳೂರು ಹಾಗೂ ಅಮೃತ್ ವಿಕಲಚೇತನ ಟ್ರಸ್ಟ್ ರಾಮನಗರ ಇವರ ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿ ಮಿತ್ರ ಎನ್ನುವ ಉದ್ಘೋಷಣೆದೊಂದಿಗೆ ಸಾಗರ ತಾಲೂಕಿನ ಸರ್ಕಾರಿ ಶಾಲೆಗೆ ಅಂದಾಜು 2500 ಹಾಗೂ ಭಟ್ಕಳ ತಾಲೂಕಿನಲ್ಲಿ ಅಂದಾಜು 3500 ವಿದ್ಯಾರ್ಥಿಗಳಿಗೆ ಉಚಿತ ನೋಟ್ ಬುಕ್ಗಳನ್ನು ವಿತರಿಸಲಾಯಿತು.
ಈ ಪುಸ್ತಕ ವಿತರಣಾ ಕಾರ್ಯಕ್ರಮವನ್ನು ಜುಲೈ ತಿಂಗಳಲ್ಲಿ ಪ್ರಾರಂಭಿಸಿದ್ದು, ಸದ್ಯ ಮುಟ್ಟಳ್ಳಿ, ಮೂಡಭಟ್ಕಳ ಸೇರಿ ಇತರೆ ಶಾಲೆಯಲ್ಲಿ ಪುಸ್ತಕ ವಿತರಣಾ ಕಾರ್ಯಕ್ರಮ ಮಾಡಿ ವಿತರಿಸಿದರು. ಈವರೆಗೂ ಕರ್ನಾಟಕ ರಾಜ್ಯಾದ್ಯಂತ ಒಟ್ಟು 11 ಜಿಲ್ಲೆಗಳಲ್ಲಿ 1,75,000 ವಿದ್ಯಾರ್ಥಿಗಳಿಗೆ 7 ಲಕ್ಷ ನೋಟ್ ಬುಕ್ಗಳನ್ನು ವಿತರಿಸಲಾಗಿದೆ.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಹೊಗೆವಡ್ಡಿ ಕ್ಷೇತ್ರ ಧರ್ಮದರ್ಶಿಗಳು ಶ್ರೀ ಅನಂತ ನಾಯ್ಕ ಉಗ್ರಾಣಿಮನೆ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ದೇಶದಲ್ಲಿ ಕೆಲವರು ಸರ್ಕಾರಿ ಶಾಲೆಯಲ್ಲಿ ಕಲಿತು ಉನ್ನತ ಹುದ್ದೆಗಳಿಗೆ ಹೋದ ಉದಾರಣೆಗಳು ಹೆಚ್ಚಾಗಿವೆ. ಸರ್ಕಾರಿ ಶಾಲೆಯ ವಿದ್ಯಾರ್ಥಿಗಳು ಅತಿ ಹೆಚ್ಚು ಅಂಕ ಪಡೆಯುವಲ್ಲಿ ಶಿಕ್ಷಕರ ಪಾತ್ರ ಪ್ರಮುಖವಾಗಿದೆ. ನಾವು ಎಷ್ಟೇ ದೊಡ್ಡ ಹುದ್ದೆಗಳಿಗೆ ಹೋದರೂ ನಮ್ಮ ಕನ್ನಡ ಭಾಷೆಯನ್ನು ಬೆಳೆಸುವಲ್ಲಿ ಹೆಚ್ಚಿನ ಪ್ರಾಮುಖ್ಯತೆ ನೀಡಿಬೇಕು. ಹಾಗಾಗಿ ನಾವು ಶಾಲೆಯ ಪ್ರತಿಯೊಬ್ಬ ವಿದ್ಯಾರ್ಥಿಗಳಿಗೆ 4 ಉಚಿತ ನೋಟ್ಬುಕ್ ನೀಡುತ್ತಿದ್ದು, ಎಲ್ಲಾ ವಿದ್ಯಾರ್ಥಿಗಳು ಸದುಪಯೋಗ ಪಡೆದುಕೊಳ್ಳಬೇಕೆಂದು ಹೇಳಿದರು.