ಕಾರವಾರ: ಮಳೆ ಕಡಿಮೆಯಾದ ಕಾರಣ ಕದ್ರಾ ಜಲಾಶಯದಿಂದ ಹೊರ ಬಿಡುತ್ತಿದ್ದ ನೀರಿನ ಪ್ರಮಾಣ ಕಡಿಮೆ ಮಾಡಲಾಗುತ್ತಿದ್ದು, ಇದೀಗ ನೀರು ಇಳಿಕೆಯಾಗತೊಡಗಿದೆ. ಆದರೆ ಪ್ರವಾಹದಿಂದ ಮುಳುಗಡೆಯಾದ ಮನೆಗಳ ಮೇಲೆ ಹತ್ತಿ ಜೀವ ಉಳುಸಿಕೊಂಡ ದೃಶ್ಯಗಳು ಮೊಬೈಲ್ನಲ್ಲಿ ಸೆರೆಯಾಗಿದ್ದು, ಭಯಾನಕವಾಗಿವೆ.
ಕದ್ರಾ ಜಲಾಶಯದಿಂದ ನೀರನ್ನು ಹೊರ ಬಿಟ್ಟ ಕಾರಣ ಜಲಾಶಯದ ಸಮೀಪವೇ ಇರುವ ಗಾಂಧಿನಗರಕ್ಕೆ ಏಕಾಏಕಿ ನೀರು ಬಂದಿದ್ದು, ಯಾರೊಬ್ಬರು ಮನೆ ಖಾಲಿ ಮಾಡಿರಲಿಲ್ಲ. ಬಳಿಕ ಜನ ಇರುವುದನ್ನು ತಿಳಿದ ಪೊಲೀಸರು ಕೆಲವರನ್ನು ತಕ್ಷಣ ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿದ್ದರಾದರೂ ಇನ್ನೂ ಕೆಲವರು ಜಲಬಂಧಿಯಾಗಿದ್ದರು.
ಇದನ್ನೂ ಓದಿ: ಲಿಂಗಸುಗೂರಲ್ಲಿ ಮಳೆಯಿಂದ ಭಾರಿ ಪ್ರವಾಹ: ನಡುಗಡ್ಡೆಯಲ್ಲಿ ಸಿಲುಕಿದ್ದ ಮೂವರು ರೈತರ ರಕ್ಷಣೆ
ನೀರು ಏರುತ್ತಲೇ ಸಾಗಿ ಮುಳುಗುವ ಹಂತಕ್ಕೆ ತಲುಪಿದಾಗ ಜನರು ಮನೆ ಮಹಡಿ ಮೇಲೆ ಹತ್ತಿ ಆಶ್ರಯ ಪಡೆದಿದ್ದರು. ಅದೃಷ್ಟವಶಾತ್, ಮನೆ ಮಹಡಿಗೆ ತಾಗುವ ರೀತಿ ನೀರು ಹರಿಯುತ್ತಿದ್ದರೂ ಕೂಡ ಆ ಕ್ಷಣ ಮನೆಗೆ ಹಾನಿಯಾಗಿರಲಿಲ್ಲ. ಕೊನೆಗೆ ನೌಕಾನೆಲೆಯ ರಕ್ಷಣಾ ತಂಡ ಇದೇ ರಿತಿ ಸಂಕಷ್ಟಕ್ಕೆ ಸಿಲುಕಿದ್ದ ನೂರಕ್ಕೂ ಹೆಚ್ಚು ಜರನ್ನ ರಕ್ಷಣೆ ಮಾಡಿದ್ದಾರೆ. ಮಹಡಿ ಮೇಲೆ ಆಶ್ರಯ ಪಡೆದಿದ್ದ ಜನ ಈ ದೃಶ್ಯಗಳನ್ನ ಸೆರೆ ಹಿಡಿದಿದ್ದು, ಭಯಾನಕ ಪರಿಸ್ಥಿತಿಯನ್ನು ಅನಾವರಣಗೊಳಿಸುತ್ತದೆ.
ನೆರೆ ಇಳಿದ ಮೇಲೆ ಈ ಭಾಗದ ಎಲ್ಲ ಮನೆಗಳು ನೆಲಸಮವಾಗಿದ್ದು, ಈ ಕುಟುಂಬಗಳು ಬೀದಿಗೆ ಬರುವಂತಾಗಿದೆ.