ಕಾರವಾರ: ಘಟ್ಟದ ಮೇಲ್ಬಾಗದ ಶಿರಸಿ, ಸಿದ್ದಾಪುರದಲ್ಲಿ ವ್ಯಾಪಕ ಮಳೆಯಾದ ಪರಿಣಾಮ ಅಘನಾಶಿನಿ ನದಿ ಕೂಡ ತುಂಬಿ ಹರಿಯುತ್ತಿದೆ. ಕುಮಟಾ ತಾಲ್ಲೂಕಿನ ನದಿಪಾತ್ರದ ಹತ್ತಾರು ಗ್ರಾಮಗಳು ಮುಳುಗಡೆಯಾಗಿವೆ. ನದಿಯಂಚಿನ ಬಡಾಳ, ಸಂತೆಗುಳಿ, ಹೆಗಡೆ, ದಿವಗಿ, ಮಿರ್ಜಾನ್ ಸೇರಿದಂತೆ ಹತ್ತಾರು ಗ್ರಾಮಗಳು ಮುಳುಗಡೆಯಾಗಿವೆ.
ನದಿಯಂಚಿನ ಬಹುತೇಕ ಕುಟುಂಬಗಳನ್ನು ಈಗಾಗಲೇ ಕಾಳಜಿ ಕೇಂದ್ರಕ್ಕೆ ಸ್ಥಳಾಂತರ ಮಾಡಲಾಗಿದ್ದು, ಕೆಲವರು ಸಂಬಂಧಿಕರ ಮನೆಗಳಿಗೆ ತೆರಳಿ ಆಶ್ರಯ ಪಡೆದಿದ್ದಾರೆ. ಇನ್ನು ಪ್ರವಾಹ ಸೃಷ್ಟಿಯಾಗುತ್ತಿದ್ದಂತೆ ಶಾಸಕ ದಿನಕರ ಶೆಟ್ಟಿ ಸ್ಥಳಕ್ಕಾಗಮಿಸಿ ಅಧಿಕಾರಿಗಳೊಂದಿಗೆ ಮಾಹಿತಿ ಪಡೆದಿದ್ದಾರೆ. ಸ್ವತಃ ನಾಡದೋಣಿಯಲ್ಲಿ ನೀರು ನುಗ್ಗಿದ ಜಾಗಕ್ಕೆ ತೆರಳಿ ಪರಿಶೀಲನೆ ನಡೆಸಿದ್ದಾರೆ.
ಎಲ್ಲೇ ನೀರು ನುಗ್ಗಿದರೂ ತಕ್ಷಣ ಸಮೀಪದ ಪರಿಹಾರ ಕೇಂದ್ರಕ್ಕೆ ಕರೆ ತರಲು ಸೂಚಿಸಲಾಗಿದೆ. ದ್ವೀಪ ಗ್ರಾಮವಾದ ಐಗಳಕುರ್ವೆಯ ಜನರು ಸುರಕ್ಷಿತ ಸ್ಥಳಕ್ಕೆ ಕರೆ ತರಲು ದೋಣಿ ಇಡಲಾಗಿದೆ ಎಂದು ಹೆಗಡೆ ಗ್ರಾಮಕ್ಕೆ ಭೇಟಿ ನೀಡಿದ ಶಾಸಕ ದಿನಕರ ಶೆಟ್ಟಿ ತಿಳಿಸಿದ್ದಾರೆ.
ಇನ್ನು ಶಿರಸಿ ಕುಮಟಾ ನಡುವಿನ ಕತಗಾಲದಲ್ಲಿ ಚಂಡಿಕಾ ಹೊಳೆ ಉಕ್ಕಿ ಹರಿಯತೊಡಗಿದೆ. ಇದರ ಪರಿಣಾಮ ರಾಜ್ಯ ಹೆದ್ದಾರಿಯ ಮೇಲೆ ಸುಮಾರು ಮೂರು ಅಡಿಗಳಷ್ಟು ನೀರು ನಿಂತಿದೆ. ಸಂಕಷ್ಟಕ್ಕೆ ಸಿಲುಕಿದವರನ್ನು ರಕ್ಷಿಸಲು ಸಿಪಿಐ ಪ್ರಕಾಶ್ ನಾಯ್ಕ್. ಪಿಎಸ್‌ಐ ಆನಂದಮೂರ್ತಿ ಸುಧಾ ಹರಿಕಾಂತ್ ಅಗ್ನಿಶಾಮಕ್ ಸಿಬ್ಬಂದಿ ನಿರಂತರ ಪ್ರಯತ್ನಿಸುತ್ತಿದ್ದಾರೆ.