ಶಿವಮೊಗ್ಗ/ಕಾರವಾರ: ದೆಹಲಿ ಗಡಿಯಲ್ಲಿ ರೈತ ಸಂಘಟನೆಗಳು ನಡೆಸುತ್ತಿರುವ ರಾಷ್ಟ್ರೀಯ ಹೆದ್ದಾರಿ ತಡೆಯನ್ನು ಬೆಂಬಲಿಸಿ, ಮಲೆನಾಡಲ್ಲೂ ಸಹ ರಾಷ್ಟ್ರೀಯ ಹೆದ್ದಾರಿ ತಡೆದು ರೈತ ಸಂಘಟನೆಗಳು ಪ್ರತಿಭಟನೆ ನಡೆಸಿದವು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ, ಜನಶಕ್ತಿ ಹೋರಾಟ ಹಾಗೂ ದಲಿತ ಸಂಘಟನೆಗಳು ಇಂದಿನ ರಾಷ್ಟ್ರೀಯ ಹೆದ್ದಾರಿ ತಡೆ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.
ಶಿವಮೊಗ್ಗದಲ್ಲಿ ಹೊನ್ನಾವರ-ಬೆಂಗಳೂರು ರಾಷ್ಟ್ರೀಯ ಹೆದ್ದಾರಿ 206 ರಸ್ತೆಯನ್ನು ಶಿವಮೊಗ್ಗ ಹೊರವಲಯದ ಶರಾವತಿ ಡೆಂಟಲ್ ಕಾಲೇಜು ಬಳಿ ರಸ್ತೆ ತಡೆ ನಡೆಸಿ, ಪ್ರತಿಭಟನೆ ನಡೆಸಲಾಯಿತು. ಎರಡು ಗಂಟೆಗೂ ಅಧಿಕ ಕಾಲ ರಸ್ತೆ ತಡೆ ನಡೆಸಿ, ಅನ್ನದಾತರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಆಂಬ್ಯುಲೆನ್ಸ್ಗೆ ದಾರಿ ಬಿಟ್ಟುಕೊಟ್ಟ ಪ್ರತಿಭಟನಾಕಾರರು: ಶಿವಮೊಗ್ಗ ಹೊರವಲಯದ ಬಳಿ ರೈತರು ಪ್ರತಿಭಟನೆ ನಡೆಸುವಾಗ ನಾಲ್ಕೈದು ಆಂಬ್ಯುಲೆನ್ಸ್ ಬಂದವು. ಈ ವೇಳೆ ಆಂಬ್ಯುಲೆನ್ಸ್ಗಳಿಗೆ ದಾರಿ ಬಿಟ್ಟು ಕೊಟ್ಟರು.
ಕಾರವಾರದಲ್ಲೂ ಹೆದ್ದಾರಿ ತಡೆ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯ್ದೆಗಳನ್ನು ಕೂಡಲೇ ವಾಪಸ್ ಪಡೆಯುವಂತೆ ಒತ್ತಾಯಿಸಿ ರೈತರು ಹೆದ್ದಾರಿ ತಡೆದು ಬೃಹತ್ ಪ್ರತಿಭಟನೆ ನಡೆಸಿದರು.
ಸಿಐಟಿಯು ನೇತೃತ್ವದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘದ ಸದಸ್ಯರು ಹಾಗೂ ಸ್ಥಳೀಯ ರೈತರು ತಾಲ್ಲೂಕಿನ ಅಪ್ಸರಕೊಂಡದ ಬಳಿ ರಾಷ್ಟ್ರೀಯ ಹೆದ್ದಾರಿ 66 ರಲ್ಲಿ ಬೃಹತ್ ಪ್ರತಿಭಟನೆ ನಡೆಸಿದರು. ಹೆದ್ದಾರಿಯಲ್ಲಿ ಸಂಚರಿಸುತ್ತಿದ್ದ ವಾಹನಗಳನ್ನು ಸುಮಾರು ಅರ್ಧ ಗಂಟೆ ಕಾಲ ತಡೆದ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.