ಕಾರವಾರ: ದೇವಸ್ಥಾನಕ್ಕೆ ಉಚಿತವಾಗಿ ಜಾಗ ನೀಡಿಲ್ಲ ಎಂಬ ಕಾರಣಕ್ಕೆ ಊರಿನವರು ಕುಟುಂಬಕ್ಕೆ ಕಳೆದ ಐದು ವರ್ಷದ ಹಿಂದೆಯೇ ಬಹಿಷ್ಕಾರ ಹಾಕಿದ್ದಾರೆ ಎನ್ನಲಾದ ಪ್ರಕರಣ ಜಿಲ್ಲೆಯ ಹಳಿಯಾಳ ಸಮೀಪದ ನೀರಲಗಿ ಗ್ರಾಮದಲ್ಲಿ ಕೇಳಿಬಂದಿದೆ. ನೀರಲಗಿಯ ಯಲ್ಲಾರಿ ಮಜನಪ್ಪ ಕದಂ ಕುಟುಂಬದವರು ತಮ್ಮ ಒಂದು ಎಕರೆ ಜಮೀನನ್ನು ಸ್ಥಳೀಯ ದೇವಸ್ಥಾನಕ್ಕೆ ದಾನ ನೀಡಲು ನಿರಾಕರಿಸಿದ್ದಕ್ಕೆ ಈ ರೀತಿ ಬಹಿಷ್ಕಾರ ಹಾಕಿದ್ದಾರೆ ಎಂದು ಹೇಳಿದ್ದಾರೆ.
ಯಲ್ಲಾರಿ ಮಜನಪ್ಪ ಕದಂ ಮಾತನಾಡಿ, '2012 ರಲ್ಲಿ ಒಂದು ಎಕರೆ ಜಮೀನು ಖರೀದಿಸಿದ್ದೆ. ಕುಟುಂಬಕ್ಕೆ ಆಧಾರವಾಗುತ್ತದೆಂದು ಜಮೀನಿನಲ್ಲಿ ಮಾವಿನ ಗಿಡಗಳನ್ನು ಬೆಳೆಸಿದೆ. 2017ರಲ್ಲಿ ಗ್ರಾಮದಲ್ಲಿರುವ ಹಿರಿಯರು ಸ್ಥಳೀಯ ದೇವಸ್ಥಾನಕ್ಕೆ ಜಮೀನು ನೀಡುವಂತೆ ಹೇಳಿದ್ದರು. ಆದರೆ, ಇದು ಜೀವನಾಧಾರಕ್ಕೆ ಇರುವ ಜಮೀನು ಎಂದು ನಿರಾಕರಿಸಿದ್ದೆ'.
'ಈ ಸಂಬಂಧ ಪಂಚಾಯಿತಿ ಕೂಡ ಮಾಡಲಾಗಿದೆ. ಪಂಚರು ಒತ್ತಡ ಹೇರಲು ಆರಂಭಿಸಿದ್ದರು. ಆದರೂ ನಾವು ಭೂಮಿ ನೀಡಲು ಒಪ್ಪದೆ ಇದ್ದಾಗ ತಮ್ಮ ಹಾಗೂ ಪತ್ನಿ ಯಳವ್ವ ಮತ್ತು ಮಕ್ಕಳಾದ ಮಹೇಶ್ ಮತ್ತು ಮಂಜುನಾಥ್ ಅವರನ್ನು ಬಹಿಷ್ಕರಿಸಿದರು. ವಿಷಯ ಇಲ್ಲಿಗೇ ನಿಲ್ಲಲಿಲ್ಲ. ನಾವು ಪೊಲೀಸರಿಗೆ ಲಿಖಿತ ದೂರು ನೀಡಿದ್ದೇವೆ. ಆದರೆ, ಈವರೆಗೂ ಯಾವುದೇ ಕ್ರಮ ಕೈಗೊಂಡಿಲ್ಲ. ಪೊಲೀಸರು ಪ್ರಕರಣವನ್ನು ದಾಖಲಿಸಿಲ್ಲ' ಎಂದು ಅವರು ಆರೋಪಿಸಿದ್ದಾರೆ.
ಇದನ್ನೂ ಓದಿ: ಮದುವೆಗೆ ವೀಳ್ಯ ನೀಡದ್ದಕ್ಕೆ ಸಾಮಾಜಿಕ ಬಹಿಷ್ಕಾರ: 10 ವರ್ಷದಿಂದ ಈ ಕುಟುಂಬಕ್ಕೆ ನರಕಯಾತನೆ
'ನಮ್ಮ ಕುಟುಂಬಕ್ಕೆ ಸಹಾಯ ಮಾಡಿದ ಅಥವಾ ನಮ್ಮನ್ನು ಭೇಟಿಯಾದ ಜನರನ್ನು ಸಹ ಬಹಿಷ್ಕರಿಸಲಾಗುತ್ತಿದೆ. ನಾವು ಶಾಸಕ ಆರ್.ವಿ.ದೇಶಪಾಂಡೆ ಮತ್ತು ಆಗಿನ ಎಂಎಲ್‌ಸಿ ಎಸ್.ಎಲ್.ಘೋಟ್ನೇಕರ್ ಅವರನ್ನು ಭೇಟಿಯಾಗಿ ಈ ಬಗ್ಗೆ ದೂರು ನೀಡಿದ್ದೆವು. ಆದರೆ ಅವರು ಇದು ನಿಮ್ಮ ಹಳ್ಳಿಯ ವಿಷಯ, ನೀವೇ ಬಗೆಹರಿಸಿಕೊಳ್ಳಿ ಎಂದು ನಿರ್ಲಕ್ಷಿಸಿದರು' ಅಂತಾ ಕದಂ ದೂರಿದರು.
ಇದನ್ನೂ ಓದಿ: ಆದಿ ಜಾಂಬವ ಹರಿಜನ ವಿದ್ಯಾರ್ಥಿ ನಿಲಯದಲ್ಲಿ ಅಕ್ರಮ?: ಧ್ವನಿ ಎತ್ತಿದ ಕುಟುಂಬಕ್ಕೆ ಬಹಿಷ್ಕಾರ
ಈ ಬಗ್ಗೆ ಜಿಲ್ಲಾಧಿಕಾರಿ ಅವರನ್ನು ಕೇಳಿದಾಗ, 'ಈ ವಿಷಯ ನನ್ನ ಗಮನಕ್ಕೆ ಬಂದಿಲ್ಲ. ಪರಿಶೀಲನೆ ನಡೆಸಿ ಅಗತ್ಯ ಕ್ರಮ ಕೈಗೊಳ್ಳುತ್ತೇನೆ' ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ನ್ಯಾಯ ಕೇಳಿದ್ದಕ್ಕೆ ಇಡೀ ಕುಟುಂಬದ ಮೇಲೆ ಸಾಮಾಜಿಕ ಬಹಿಷ್ಕಾರ.. ಇನ್ನೂ ಯಾವ ಕಾಲದಲ್ಲಿದ್ದೇವೆ ನಾವು!?