ಶಿರಸಿ: ಪರಿಸರ ರಕ್ಷಣೆ ಹಾಗೂ ಅಭಿವೃದ್ಧಿ ಎರಡನ್ನೂ ಗಮನಿಸಿಕೊಂಡು ಜೊತೆ ಜೊತೆಯಾಗಿ ಎಚ್ಚರಿಕೆಯ ಹೆಜ್ಜೆಯನ್ನು ಪರಿಸರವಾದಿಗಳು ಇಡಬೇಕು ಎಂದು ಉತ್ತರ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರ್ ಹೇಳಿದರು.
ಶಿರಸಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕುಮಟಾದಿಂದ ಶಿರಸಿಗೆ ಬರುವ ರಸ್ತೆಯನ್ನು ಅಗಲೀಕರಣ ಮಾಡದೇ ಹೋದಲ್ಲಿ ಭವಿಷ್ಯವೇ ಇಲ್ಲವಾಗಿದೆ. ಅದಕ್ಕೆ ಅಡ್ಡಗಾಲು ಹಾಕಿದಲ್ಲಿ ಜಿಲ್ಲೆಯಲ್ಲಿ ಬದುಕುವುದು ಕಷ್ಟವಾಗುತ್ತದೆ. ಆದ ಕಾರಣ ಪರಿಸರವಾದಿಗಳು ಎಚ್ಚರಿಕೆಯ ಹೆಜ್ಜೆ ಇಡಬೇಕು ಎಂದರು. ಸರ್ಕಾರಕ್ಕೆ ಪರಿಸರದ ಬಗ್ಗೆ ಕಾಳಜಿಯಿದೆ. ಅರಣ್ಯ ಇಲಾಖೆ ಕೋಟ್ಯಂತರ ಗಿಡಗಳನ್ನು ನೆಟ್ಟು ಬೆಳೆಸುತ್ತಿದೆ. ಜನಸಾಮಾನ್ಯರಿಗೆ ಸಾಕಷ್ಟು ಗಿಡಗಳನ್ನು ನೀಡಿ ಪ್ರೋತ್ಸಾಹಿಸುತ್ತಿದೆ. ಆದ ಕಾರಣ ಪರಿಸರ ಕಾಳಜಿ ಎಂಬುದು ಕೆಲವರ ಉದ್ಯೋಗ ಅಥವಾ ಗುತ್ತಿಗೆ ಆಗಬಾರದು ಎಂದು ಅಭಿಪ್ರಾಯಪಟ್ಟರು.
ಉತ್ತರ ಕನ್ನಡ ಜಿಲ್ಲೆಯಲ್ಲಿ ಅಂಕೋಲಾ-ಹುಬ್ಬಳ್ಳಿ ರೈಲ್ವೆ ಮಾರ್ಗ, ವಿಮಾನ ನಿಲ್ದಾಣ, ಬಂದರು ಅಭಿವೃದ್ಧಿ ಎಲ್ಲವೂ ಆಗಬೇಕಿದೆ. ಇದರಿಂದ ಪ್ರವಾಸೋದ್ಯಮಕ್ಕೂ ಅನುಕೂಲವಾಗಲಿದೆ. ಆಗ ಜಿಲ್ಲೆಯ ಸಮಗ್ರ ಅಭಿವೃದ್ಧಿ ಆಗಲಿದೆ. ಪರಿಸರವಾದಿಗಳಿಗೆ ಬಿಜೆಪಿ ಪಕ್ಷದ ಅಡಿಯಲ್ಲಿ ಹೆಸರಿಸಿ ಯಾವುದೇ ಹೇಳಿಕೆ ನೀಡುವುದಿಲ್ಲ. ಆದರೆ ಅವರು ಅಭಿವೃದ್ಧಿಗೆ ಅಡ್ಡಗಾಲು ಹಾಕಬಾರದು. ಇಲ್ಲದೇ ಹೋದಲ್ಲಿ ಯುವ ಜನಾಂಗದ ಆಕ್ರೋಶಕ್ಕೆ ಅವರು ಗುರಿಯಾಗಬೇಕಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಯೊಂದಕ್ಕೆ ಅವರು ಉತ್ತರಿಸಿದರು.