ಭಟ್ಕಳ: ಭಟ್ಕಳದಲ್ಲಿ ದೀರ್ಘಕಾಲೀನ ಶಾಂತಿ ಸುವ್ಯವಸ್ಥೆ ಸ್ಥಾಪನೆಗೆ ಒತ್ತು ನೀಡುವ ನಿಟ್ಟಿನಲ್ಲಿ ಸ್ಥಳೀಯ ಪೊಲೀಸ್ ಅಧಿಕಾರಿಗಳೊಂದಿಗೆ ಚರ್ಚೆ ನಡೆಸಿ ಮುಂದಿನ ಕ್ರಮ ಕೈಗೊಳ್ಳುತ್ತೇವೆ ಎಂದು ಎಡಿಜಿಪಿ ಅಲೋಕ್ ಕುಮಾರ್ ಹೇಳಿದ್ದಾರೆ. ಇಂದು ಭಟ್ಕಳಕ್ಕೆ ಭೇಟಿ ನೀಡಿ, ವಿವಿಧ ಸಂಘ ಸಂಸ್ಥೆಗಳ ಪ್ರತಿನಿಧಿಗಳಿಂದ ಅಹವಾಲು ಆಲಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದರು.
ಸದ್ಯ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇರುವುದರಿಂದ ಯಾವುದೇ ಪಕ್ಷದ ವತಿಯಿಂದ ಮೆರವಣಿಗೆ ನಡೆಸಬೇಕಾದರೂ ಪರವಾನಗಿ ಪಡೆದುಕೊಳ್ಳಬೇಕು. ನೀತಿ ಸಂಹಿತೆ ಜಾರಿಯಲ್ಲಿ ಇದ್ದ ಅವಧಿಯಲ್ಲಿಯೇ ಮೆರವಣಿಗೆ ನಡೆಸಿದ ಒಂದೆರಡು ಘಟನೆಯ ಬಗ್ಗೆ ಮಾಹಿತಿ ಲಭಿಸಿದ್ದು, ಈ ಬಗ್ಗೆ ಮಾಹಿತಿ ಪಡೆದುಕೊಳ್ಳಲಾಗುವುದು. ಶಾಂತಿಯುತ ಚುನಾವಣೆ ಸಂಬಂಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು. ಗಾಂಜಾ ಸಾಗಾಟ, ಮಾರಾಟ, ಸೇವನೆಯ ಬಗ್ಗೆಯೂ ನಿಗಾ ವಹಿಸಲಾಗುತ್ತದೆ. ಭಟ್ಕಳದಲ್ಲಿ ಟ್ರಾಫಿಪ್ ಪೊಲೀಸ್ ಸ್ಟೇಶನ್ ಸ್ಥಾಪನೆಯ ಸಂಬಂಧ ಪ್ರಸ್ತಾವನೆಯನ್ನು ಪಡೆದು ಸರ್ಕಾರಕ್ಕೆ ಬರೆದುಕೊಳ್ಳಲಾಗುವುದು ಎಂದು ವಿವರಿಸಿದರು.
ಸಾಮಾಜಿಕ ಜಾಲತಾಣದಲ್ಲಿ ವೈಯಕ್ತಿಕ ನಿಂದನೆ, ಅಪರಾಧ ಚಟುವಟಿಕೆಗಳಲ್ಲಿ ನಿರತ ವ್ಯಕ್ತಿಗಳನ್ನು ಕೆಲವೇ ದಿನಗಳಲ್ಲಿ ಪತ್ತೆ ಹಚ್ಚಿ ಅವರ ವಿರುದ್ಧ ಕಠಿಣ ಕಾನೂನು ಕ್ರಮ ಜರುಗಿಸುತ್ತೇವೆ. ಈ ಬಗ್ಗೆ ಪೊಲೀಸ್ ಇಲಾಖೆ ಅಗತ್ಯ ಮಾಹಿತಿ ಕಲೆ ಹಾಕಿದೆ. ಸಾಮಾಜಿಕ ಜಾಲತಾಣಗಳಲ್ಲಿನ ನಕಲಿ - ಖಾತೆ, ಅದರ ಸೃಷ್ಟಿಕರ್ತರನ್ನು ಪತ್ತೆ ಹಚ್ಚುತ್ತೇವೆ. ಸಾಮಾಜಿಕ ವ್ಯವಸ್ಥೆಯನ್ನು ಹಾಳುಗೆಡವುವ ವ್ಯಕ್ತಿಗಳನ್ನು ಕಾನೂನು ಕಟಕಟೆಗೆ ತಂದು ನಿಲ್ಲಿಸುತ್ತೇವೆ ಎಂದು ತಿಳಿಸಿದರು.
ಪಶ್ಚಿಮ ವಲಯ ಐಜಿಪಿ ಡಾ. ಚಂದ್ರಗುಪ್ತ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ ಎನ್., ಡಿವೈಎಸ್ಪಿ ಶ್ರೀಕಾಂತ ಮೊದಲಾದವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಮೋದಿ ಬಂಡೀಪುರ ಭೇಟಿಗೆ ದಿನಗಣನೆ-ಭದ್ರತೆ ಕೈಗೊಳ್ಳಲು ಎಡಿಜಿಪಿ ಅಲೋಕ್ ಕುಮಾರ್ ಎಂಟ್ರಿ