ಶಿರಸಿ(ಉತ್ತರ ಕನ್ನಡ): ಜಿಲ್ಲಾ ಮಧ್ಯವರ್ತಿ ಬ್ಯಾಂಕಿನ(ಕೆಡಿಸಿಸಿ) ಚುನಾವಣೆಯನ್ನು ಸಹಕಾರ ಭಾರತಿ ನೇತೃತ್ವದಲ್ಲಿ ಎದುರಿಸಲಾಗುತ್ತಿದ್ದು, ಮುಂದಿನ 5 ವರ್ಷಗಳ ಆಡಳಿತ ಮಂಡಳಿಗೆ ಸಹಕಾರ ಭಾರತಿ ಸದಸ್ಯರು ಆಯ್ಕೆ ಆಗಲಿದ್ದಾರೆ ಎಂದು ಸಹಕಾರ ಭಾರತಿ ರಾಜ್ಯಾಧ್ಯಕ್ಷ ಹಾಗೂ ಕ್ಯಾಂಪ್ಕೋ ಸಂಸ್ಥೆಯ ಅಧ್ಯಕ್ಷ ಎಸ್. ಆರ್. ಸತೀಶ್ಚಂದ್ರ ತಿಳಿಸಿದರು.
ನಗರದ ಪಂಚವಟಿ ಹೊಟೇಲ್ ನಲ್ಲಿ ಮಾಧ್ಯಮಗೋಷ್ಟಿ ನಡೆಸಿ ಮಾತನಾಡಿದ ಅವರು, ಸಹಕಾರ ಭಾರತಿ ಅಡಿಯಲ್ಲಿ ಎಲ್ಲಾ ಸಹಕಾರಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು, ಪಕ್ಷಾತೀತವಾಗಿ ಚುನಾವಣೆ ಎದುರಿಸಲಾಗುತ್ತದೆ ಎಂದರು.
ಸಹಕಾರ ಭಾರತಿ ಪಕ್ಷಾತೀತ ನಿಲುವಿನಲ್ಲಿ ಕೆಲಸ ಮಾಡುತ್ತಿದೆ. ಇದು ದೇಶದ 450 ಜಿಲ್ಲೆಗಳಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ರಾಜ್ಯದ ಕ್ಯಾಂಪ್ಕೋ, ಮ್ಯಾಮ್ಕೋಸ್ ಸೇರಿದಂತೆ ಅನೇಕ ಸಂಸ್ಥೆಗಳಲ್ಲಿ ಸಹಕಾರ ಭಾರತಿ ಸದಸ್ಯರಿದ್ದಾರೆ. ಇದು ಸಹಕಾರದ ಏಳಿಗೆಗಾಗಿ ಕೆಲಸ ಮಾಡುವ ರಾಷ್ಟ್ರೀಯ ಸಂಸ್ಥೆಯಾಗಿದ್ದು, ಅದರ ನೇತೃತ್ವದ ಸದಸ್ಯರ ಆಡಳಿತ ಮಂಡಳಿ ಕೆಡಿಸಿಸಿ ಬ್ಯಾಂಕ್ ಅನ್ನು ಮುನ್ನಡೆಸಲಿದೆ ಎಂದು ತಿಳಿಸಿದರು.
ಸಹಕಾರ ಕ್ಷೇತ್ರದಲ್ಲಿ ಬದಲಾವಣೆ ತರಬೇಕು ಎನ್ನುವ ಉದ್ದೇಶದೊಂದಿಗೆ ಸದಸ್ಯರನ್ನು ಆಯ್ಕೆ ಮಾಡಲಾಗಿದೆ. ಸಹಕಾರಿ ಕ್ಷೇತ್ರದಲ್ಲಿ ಸಕ್ರಿಯ ವ್ಯಕ್ತಿಗಳನ್ನು ಗುರುತಿಸಿ, ಕಾಂಗ್ರೆಸ್ ಸೇರಿದಂತೆ ಎಲ್ಲಾ ಪಕ್ಷದಲ್ಲಿ ಇರುವವರನ್ನು ಗುರುತಿಸಿ ಸಹಕಾರ ಭಾರತಿ ಸದಸ್ಯರ ಆಯ್ಕೆ ಮಾಡಲಾಗುತ್ತಿದೆ ಎಂದ ಅವರು, ಬ್ಯಾಂಕ್ ನ ನಿರ್ದೇಶಕ ಸ್ಥಾನಕ್ಕೆ ಸ್ಪರ್ಧಿಸುವ ಅಂತಿಮ ಸದಸ್ಯರ ಪಟ್ಟಿಯನ್ನು ಶೀಘ್ರದಲ್ಲೇ ನೀಡಲಾಗುವುದು ಎಂದರು.