ಭಟ್ಕಳ: ಹಝರತ್ ಮಹಮ್ಮದ್ ಪೈಗಂಬರರ ಜನ್ಮ ದಿನಾಚರಣೆಯ ಅಂಗವಾಗಿ ಬಝ್ಮೆ ಫೈಝೆರಸೂಲ್ ಹಾಗೂ ಸುನ್ನಿ ಸ್ಟೂಡೆಂಟ್ಸ್ ಫೆಡರೇಶನ್ ನೇತೃತ್ವದಲ್ಲಿ ಭಾನುವಾರ ಬೃಹತ್ ಮಿಲಾದ್ ಮೆರವಣಿಗೆ ನೆರವೇರಿತು.
ಸಾವಿರಾರು ಸಂಖ್ಯೆಯಲ್ಲಿ ಸೇರಿದ ಮುಸಲ್ಮಾನರು ಪ್ರವಾದಿ ಮುಹಮ್ಮದ್ ಪೈಗಂಬರರ ಸ್ತುತಿಗೀತೆಗಳನ್ನು ಹಾಡುತ್ತ ಮೆರವಣೆಗೆಯನ್ನು ಯಶಸ್ವಿಗೊಳಿಸಿದರು. ಸಂಜೆ ಈದ್ಗಾ ಮೈದಾನದಿಂದ ಆರಂಭಗೊಂಡ ಮಿಲಾದ್ ಮೆರವಣಿಗೆ ಶಮ್ಸುದ್ದೀನ್ ವೃತ್ತದ ಮೂಲಕ ಮುಖ್ಯ ರಸ್ತೆ, ಸುಲ್ತಾನ್ ಸ್ಟ್ರೀಟ್ ಚೌಕ್ ಬಜಾರ್, ಮಹಮ್ಮದ್ ಅಲಿ ರೋಡ್, ಮಾರಿಕಟ್ಟೆ ಮಾರ್ಗವಾಗಿ ಸಾರ್ವಜನಿಕ ಮೈದಾನದಲ್ಲಿ ಸಮಾಪ್ತಿಗೊಂಡಿತು.
ಬಝ್ಮೆ ಫೈಝೆರಸೂಲ್ ಸಂಘಟನೆಯ ಮುಖಂಡರಾದ ಅಬ್ದುಲ್‍ಅಲೀಮ್ ಗವಾಯಿ, ಕಾಂಗ್ರೆಸ್ ಅಲ್ಪಸಂಖ್ಯಾತ ಘಟಕದ ಜಿಲ್ಲಾಧ್ಯಕ್ಷ ಅಬ್ದುಲ್ ಮಜೀದ್, ಮುಖಂಡರಾದ ಮುನೀರ್ ಶೇಖ್, ಫೈಝಾನ್‍ರಝಾ, ಅಬುಹುರೈರಾ ಅಕ್ರಮಿ, ಜಿಫ್ರಿಅಕ್ರಮಿ, ಮೌಲಾನ ಅಷದ್ ಸಿದ್ದೀಖಾ, ರಿಝ್ವಾನ್ ಸಿದ್ದೀಖಾ ಸೇರಿದಂತೆ ಹಲವು ಗಣ್ಯರು ಮೆರವಣಿಗೆ ನೇತೃತ್ವ ವಹಿಸಿದ್ದರು.
ಮೆರವಣೆಗೆಯಲ್ಲಿ ವಿದ್ಯಾರ್ಥಿಗಳ ದಫ್ ಕುಣಿತ, ಹಾಗೂ ಆಕರ್ಷಕ ಟ್ಯಾಬ್ಲೊಗಳು ಜನರ ಗಮನ ಸೆಳೆದವು. ತಾಲೂಕಿನ ವಿವಿಧ ಮಸೀದಿಗಳಲ್ಲಿ ಮುಸ್ಲಿಂ ಬಾಂಧವರು ವಿಶೇಷ ಪ್ರಾರ್ಥನೆಯನ್ನು ಸಲ್ಲಿಸಿದರು. ನಂತರ ಪರಸ್ಪರ ಶುಭಾಶಯಗಳನ್ನು ಕೋರುವುದರ ಮೂಲಕ ಹಬ್ಬವನ್ನು ಸಂಭ್ರಮದಿಂದ ಆಚರಿಸಿದರು. ಮೆರವಣಿಗೆಯೂ ಭಟ್ಕಳದ ಪೋಲೀಸ್ ಬಿಗಿ ಬಂದೋ ಬಸ್ತ್ನಲ್ಲಿ ನಡೆಯಿತು.