ಕಾರವಾರ: ಉತ್ತರ ಕನ್ನಡ ಕರಾವಳಿ ನಿಯಂತ್ರಣ ವಲಯದಲ್ಲಿ ಮರಳುಗಾರಿಕೆ ಬಂದ್ ಆಗಿ 2 ವರ್ಷ ಸಮೀಪಿಸುತ್ತಿದೆ. ಪರಿಸರದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವ ನಿಟ್ಟಿನಲ್ಲಿ ಸಿಆರ್‌ಝಡ್ ವಲಯದಲ್ಲಿ ಮರಳುಗಾರಿಕೆಯನ್ನು ಸ್ಥಗಿತಗೊಳಿಸಲಾಗಿದೆ. ಆದರೆ ಅಧಿಕೃತ ಮರಳುಗಾರಿಕೆ ಬಂದ್ ಆಗಿದ್ದರೂ ಸಹ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದ್ದು, ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂಬ ಆರೋಪ ಇದೀಗ ಕೇಳಿ ಬಂದಿದೆ.
ಹೌದು. ಉತ್ತರ ಕನ್ನಡ ಜಿಲ್ಲೆಯಲ್ಲಿ ಮರಳುಗಾರಿಕೆ ಮೇಲೆ ನಿಷೇಧ ಹೇರಿ 2 ವರ್ಷ ಕಳೆಯುತ್ತಾ ಬಂದಿದೆ. ಆದರೆ ಈವರೆ ಅಧಿಕೃತ ಮರಳುಗಾರಿಕೆಗೆ ಅನುಮತಿ ಸಿಕ್ಕಿಲ್ಲ. ಮರಳುಗಾರಿಕೆಗೆ ನಿಷೇಧವಿದ್ದರೂ ಜಿಲ್ಲೆಯಲ್ಲಿ ಅಕ್ರಮ ಮರಳುಗಾರಿಕೆ ಅವ್ಯಾಹತವಾಗಿ ನಡೆಯುತ್ತಿದೆ ಎಂಬ ದೂರುಗಳು ಕೇಳಿ ಬರುತ್ತಿವೆ. ಅಧಿಕೃತ ಮರಳುಗಾರಿಕೆ ಬಂದ್ ಆಗಿರುವುದರಿಂದ ಮರಳಿಗೆ ಸಾಕಷ್ಟು ಬೇಡಿಕೆಯಿದೆ. ಇದರಿಂದ ಅನಧಿಕೃತ ಮರಳುಗಾರಿಕೆ ನಡೆಸುವವರಿಗೆ ಅನುಕೂಲ ಮಾಡಿಕೊಟ್ಟಂತಾಗಿದೆ. ಅಧಿಕೃತ ಪರವಾನಗಿದಾರರು ಮರಳುಗಾರಿಕೆಗೆ ಅನುಮತಿ ಇಲ್ಲದ ಹಿನ್ನೆಲೆ ಸುಮ್ಮನೆ ಕೂರುವಂತಾಗಿದ್ದು, ಅಕ್ರಮ ದಂಧೆಕೋರರು ಮಾತ್ರ ಹಗಲು ರಾತ್ರಿಯೆನ್ನದೇ ಮರಳುಗಾರಿಕೆ ಮುಂದುವರೆಸಿದ್ದಾರೆ ಎಂದು ಈ ಭಾಗದ ಜನರು ಆರೋಪಿಸುತ್ತಿದ್ದಾರೆ.
ಇದನ್ನೂ ಓದಿ: ತುಂಗಭದ್ರಾ ತೀರದ ಅಕ್ರಮ ಮರಳು ಅಡ್ಡೆಗಳ ಮೇಲೆ ದಾಳಿ: ಸಿಬ್ಬಂದಿ ಮೇಲೆಯೇ ಹಲ್ಲೆ - ದೂರು ದಾಖಲು
ಅಕ್ರಮ ಮರಳುಗಾರಿಕೆ ಗಟ್ಟಲು ಆಗ್ರಹ: 'ಸಾಕಷ್ಟು ಬಾರಿ ಅಕ್ರಮ ಮರಳುಗಾರಿಕೆ ವಿರುದ್ಧ ದೂರು ಸಲ್ಲಿಸಿದರೂ ಸಹ ಅಧಿಕಾರಿಗಳು ಮಾತ್ರ ಅಕ್ರಮ ಮರಳು ದಂಧೆಕೋರರ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುತ್ತಿಲ್ಲ. ಇದರಿಂದ ಅಧಿಕೃತ ಮರಳುಗಾರರಿಗೆ ಸಾಕಷ್ಟು ನಷ್ಟ ಉಂಟಾಗುವಂತಾಗಿದ್ದು, ಅಕ್ರಮ ಮರಳುಗಾರಿಕೆ ನಿಯಂತ್ರಿಸುವಂತೆ' ಮರಳು ಗುತ್ತಿಗೆದಾರರು ಮನವಿ ಮಾಡಿದ್ದಾರೆ.
'ಕಾಳಿ ನದಿ ಪರಿಸರ ಸೂಕ್ಷ್ಮ ವಲಯ ಎನ್ನುವ ಉದ್ದೇಶದಿಂದ ಈ ಹಿಂದೆ ರಾಷ್ಟ್ರೀಯ ಹಸಿರು ಪೀಠ ಮರಳುಗಾರಿಕೆ ನಡೆಸಲು ನಿಷೇಧ ಹೇರಿತ್ತು. ಅದರಂತೆ ಜಿಲ್ಲಾ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕೃತ ಮರಳುಗಾರಿಕೆ ಸ್ಥಗಿತಗೊಳಿಸಿದ್ದು, ಅನಧಿಕೃತ ಮರಳುಗಾರಿಕೆಯನ್ನ ಮಾತ್ರ ಬಂದ್ ಮಾಡಿಸಿಲ್ಲ' ಎಂಬುವುದು ಮರಳು ಪರವಾನಗಿದಾರರ ಆರೋಪ.
ಜಿಲ್ಲಾಧಿಕಾರಿಗಳು ಹೇಳುವುದೇನು?: 'ಕಳೆದೊಂದು ವರ್ಷದ ಅವಧಿಯಲ್ಲಿ ಅಕ್ರಮವಾಗಿ ಮರಳು ಸಾಗಿಸುತ್ತಿದ್ದ ಸುಮಾರು 87 ವಾಹನಗಳನ್ನ ವಶಪಡಿಸಿಕೊಂಡಿದ್ದು, 568.3 ಮೆಟ್ರಿಕ್ ಟನ್ ಮರಳನ್ನ ಜಪ್ತಿ ಮಾಡಲಾಗಿತ್ತು. ಇದರಿಂದ 36.10 ಲಕ್ಷದಷ್ಟು ದಂಡ ಸಂಗ್ರಹವಾಗಿತ್ತು. ಇದನ್ನು ಹೊರತುಪಡಿಸಿ ಅಕ್ರಮವಾಗಿ ಮರಳು ಸಂಗ್ರಹ ಮಾಡಿದ 8 ಕಡೆಗಳಲ್ಲಿ ದಾಳಿ ನಡೆಸಲಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಎಲ್ಲ ಕಡೆ ಚೆಕ್‌ಪೋಸ್ಟ್‌ಗಳಲ್ಲಿ ಸಿಬ್ಬಂದಿಯೊಬ್ಬರನ್ನು ನಿಯೋಜಿಸಿ, ಸಿಸಿ ಕ್ಯಾಮರಾ ಅಳವಡಿಸುವ ಮೂಲಕ ಅಕ್ರಮ ಮರಳು ಸಾಗಾಟದ ಮೇಲೆ ನಿಗಾ ಇರಿಸಲಾಗುವುದು'- ಜಿಲ್ಲಾಧಿಕಾರಿ ಗಂಗೂಬಾಯಿ ಮಾನಕರ್.
ಇದನ್ನೂ ಓದಿ: ಅಕ್ರಮ ಮರಳು ಅಡ್ಡೆಗಳ ಮೇಲೆ ಅಧಿಕಾರಿಗಳ ದಾಳಿ : 20ಕ್ಕೂ ಹೆಚ್ಚು ಟಿಪ್ಪರ್ ಮರಳು ವಶ