ಭಟ್ಕಳ (ಉತ್ತರ ಕನ್ನಡ): ಸಾವಿರ ಜನ ಸಾವಿರ ಬಗೆಯಲ್ಲಿ ಕೋವಿಡ್ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ, ಮಾಧ್ಯಮಗಳಲ್ಲಿ ಹೇಳಿಕೊಳ್ಳುತ್ತಿದ್ದರೆ ಅಧಿಕಾರಿಗಳಾಗಿ ಎಲ್ಲದಕ್ಕೂ ಸ್ಪಷ್ಟೀಕರಣ ಕೊಡುವ ಅಧಿಕಾರ ನಮಗೆ ಇಲ್ಲ ಎಂದು ಉತ್ತರ ಕನ್ನಡ ಜಿಲ್ಲಾಧಿಕಾರಿ ಹರೀಶ್ ಕುಮಾರ್ ಹೇಳಿದರು.
ಇಲ್ಲಿನ ಸಹಾಯಕ ಆಯುಕ್ತರ ಕಚೇರಿಯಲ್ಲಿ ಕೋವಿಡ್ ಕುರಿತು ತಾಲೂಕು ಮಟ್ಟದ ಅಧಿಕಾರಿಗಳ ಸಭೆಯ ಪೂರ್ವದಲ್ಲಿ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.
ಸರ್ಕಾರದ ಮಟ್ಟದ ಅಧಿಕಾರಿಗಳು ಕೋವಿಡ್ ಬಗ್ಗೆ ಜನರಲ್ಲಿ ಜಾಗೃತಿ ಮೂಡಿಸುತ್ತಾ ಕೆಲಸ ಮಾಡುತ್ತಿದ್ದರೆ, ಜನಪ್ರತಿನಿಧಿಗಳು ಗಂಭೀರ ಕಾಯಿಲೆ ಅಲ್ಲ ಎಂದು ಜನರಲ್ಲಿ ಹೇಳುತ್ತಿರುವ ಕುರಿತು ಪತ್ರಕರ್ತರ ಪ್ರಶ್ನೆಗೆ ಜಿಲ್ಲಾಧಿಕಾರಿಗಳು, ಜನಪ್ರತಿನಿಧಿಗಳ ಹೇಳಿಕೆ ಅವರ ವೈಯಕ್ತಿಕ ಹಾಗೂ ಅವರ ಪಕ್ಷದ ಕಾರ್ಯಕ್ರಮದಲ್ಲಿ ಹೇಳಿದ್ದರ ಹಿನ್ನೆಲೆ ಜಿಲ್ಲಾಧಿಕಾರಿಯಾಗಿ ಎಲ್ಲದಕ್ಕೂ ನಾನು ಉತ್ತರಿಸಬೇಕೆಂದಿಲ್ಲ ಎಂದು ಹೇಳಿದರು.
ಒಬ್ಬೊಬ್ಬರಿಂದ ಒಂದೊಂದು ಹೇಳಿಕೆ ಬರುವುದು ಸಾಮಾನ್ಯವಾಗಿದೆ. ಜನರಿಗೆ ಕೊರೊನಾ ಬಗ್ಗೆ ಸಮರ್ಪಕ ಮಾಹಿತಿ ನೀಡಿ ಜಾಗೃತಿ ಮೂಡಿಸುವ ಕೆಲಸ ಮಾಡಬೇಕು. ಇದು ಎಲ್ಲರ ಜವಾಬ್ದಾರಿ ಆಗಿದೆ ಎಂದರು.