ಭಟ್ಕಳ (ಉತ್ತರಕನ್ನಡ): ಭಟ್ಕಳದ ಹೆಬಳೆಯ ಕೋವಿಡ್ ಆಸ್ಪತ್ರೆಯಲ್ಲಿನ ತಮಗೆ ಸರಿಯಾದ ಆರೊಗ್ಯ ಮಾಹಿತಿ ನೀಡದೆ, ತಾಲೂಕು ಆಡಳಿತ ವಂಚಿಸುತ್ತಿದೆ ಎಂದು ಕೊರೊನಾ ಸೋಂಕಿತರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಹಲವು ದಿನಗಳಿಂದ ತಾಲೂಕಿನ ವಿವಿಧೆಡೆಯಿಂದ ಬಂದ ಕೊರೊನಾ ಸೋಂಕಿತರನ್ನು ಹೆಬಳೆಯ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಿಸಲಾಗಿತ್ತು. ಈಗಾಗಲೇ 150ಕ್ಕೂ ಅಧಿಕ ಮಂದಿ ಈ ಕೋವಿಡ್ ಆಸ್ಪತ್ರೆಯಲ್ಲಿ ದಾಖಲಾಗಿದ್ದಾರೆ. ಆದರೆ, ಈ ಆಸ್ಪತ್ರೆಯ ಹೊಣೆಗಾರಿಕೆಯನ್ನು ಹೊತ್ತಿರುವ ತಾಲೂಕು ಆಡಳಿತ, ಸೋಂಕಿತರನ್ನು ದಾಖಲಿಸುವಲ್ಲಿ ತೋರಿಸುವ ಆಸಕ್ತಿ ಅವರಿಗೆ ನೀಡುವ ಸೌಲಭ್ಯದಲ್ಲಿ ತೋರಿಸುತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಸೋಂಕಿತರು ದಾಖಲಾಗಿ ಹಲವು ದಿನಗಳೇ ಕಳೆದಿದೆ. ಆದರೂ ಕೂಡ ಅವರ ಗಂಟಲು ದ್ರವ ಪರೀಕ್ಷೆಯ ಎರಡನೇ ವರದಿಯ ಬಗ್ಗೆ ಮಾಹಿತಿ ನೀಡುತ್ತಿಲ್ಲ. ತಹಶೀಲ್ದಾರ್ ವರದಿಯೇ ಬಂದಿಲ್ಲ ಎಂದು ಸುಳ್ಳು ಹೇಳುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು, ಜುಲೈ 11ರಂದು ನಡೆದ ಎರಡನೇ ಕೋವಿಡ್ ಪರೀಕ್ಷೆಯಲ್ಲಿ ಕೆಲವರ ವರದಿ ನೆಗೆಟಿವ್ ಬಂದರೂ ಕೂಡ ಡಿಸ್ಚಾರ್ಜ್ ಮಾಡದೇ ತಾಲೂಕು ಆಡಳಿತ ನಿರ್ಲಕ್ಷ್ಯ ತೋರಿಸುತ್ತಿದೆ ಎಂದು ಇತ್ತೀಚೆಗೆ ಮೃತಪಟ್ಟ ಭಟ್ಕಳದ ಧರ್ಮಗುರುಗಳ ಕುಟುಂಬದವರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ವಿಷಯ ತಿಳಿದು ಸ್ಥಳಕ್ಕಾಮಿಸಿದ ಭಟ್ಕಳ ಪೊಲೀಸ್ ಇನ್ಸ್ಪೆಕ್ಟರ್ ದಿವಾಕರ್, ಸೋಂಕಿತರನ್ನು ಸಮಾಧಾನಪಡಿಸಿದ್ದಾರೆ.
ಕ್ವಾರಂಟೈನ್ ಕೇಂದ್ರದಲ್ಲೂ ಅಸ್ಥವ್ಯಸ್ಥೆ:
ಕಳೆದ ಹಲವು ದಿನಗಳ ಹಿಂದೆ ಯುಎಇ ಹಾಗೂ ದುಬೈನಿಂದ ಬಂದು ಹೆಬಳೆಯ ಅಲಿ ಪಬ್ಲಿಕ್ ಶಾಲೆ ಹಾಗೂ ನಗರದ ಖಾಸಗಿ ಹೋಟೆಲ್ನಲ್ಲಿದ್ದವರ ಗಂಟಲು ದ್ರವ ತೆಗೆಯದೇ ವಿಳಂಬ ನೀತಿ ಅನುಸರಿಸಿದ್ದರು ಎಂಬ ಆರೋಪ ಕೇಳಿಬಂದಿತ್ತು. ನಾವು ದುಬೈದಿಂದ ಬಂದು 10 ದಿನವಾದರೂ ಇಲ್ಲಿಯತನಕ ಯಾವೊಬ್ಬ ಅಧಿಕಾರಿಯೂ ಕ್ವಾರಂಟೈನ್ ಕೇಂದ್ರದ ಹತ್ತಿರಕ್ಕೆ ಬರಲಿಲ್ಲ. ತಾಲೂಕು ಆಡಳಿತಕ್ಕೆ ಫೋನ್ ಮಾಡಿದಾಗಲೂ ಇಂದು ಸ್ವಾಬ್ ತೆಗೆಯುತ್ತೇವೆ, ನಾಳೆ ತೆಗೆಯುತ್ತೇವೆ ಎಂದು ಸಬೂಬು ಹೇಳಿ ಜಾರಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.