ಕಾರವಾರ: ಏಷ್ಯಾದಲ್ಲೇ ಅತೀ ದೊಡ್ಡದಾದ ಕದಂಬ ನೌಕಾನೆಲೆ ನಿರ್ಮಾಣಕ್ಕಾಗಿ ಈ ಹಿಂದೆ ಸಾವಿರಾರು ಕುಟುಂಬಗಳು ಭೂಮಿ ನೀಡಿ ನಿರಾಶ್ರಿತರಾಗಿದ್ದರು. ಅವರೆಲ್ಲರೂ ಕಾರವಾರ, ಅಂಕೋಲಾ ಸುತ್ತಮುತ್ತಲಿನ ಪ್ರದೇಶದಲ್ಲೇ ಮತ್ತೆ ಬದುಕು ಕಟ್ಟಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಆದರೆ ಇದೀಗ ನೌಕಾನೆಲೆಯ ಎರಡನೇ ಹಂತದ ವಿಸ್ತರಣಾ ಕಾಮಗಾರಿ ಪ್ರಾರಂಭವಾಗಿದ್ದು, ನೌಕಾನೆಲೆಗೆ ಭೂಮಿ ನೀಡಿದ್ದವರಿಗೆ ಇದೀಗ ಮತ್ತೆ ನಿರಾಶ್ರಿತರಾಗುವ ಆತಂಕ ಎದುರಾಗಿದೆ.
ನೌಕಾನೆಲೆಯ ಎರಡನೇಯ ಹಂತದ ಕಾಮಗಾರಿಗಾಗಿ ಅಂಕೋಲಾ ತಾಲೂಕಿನ ಗಂಗಾವಳಿ ನದಿಗೆ ಹೊಂದಿಕೊಂಡಿರುವ ಸುಮಾರು 6 ಗ್ರಾಮಗಳ 3,453 ಎಕರೆ ಜಮೀನನ್ನು ವಶಪಡಿಸಿಕೊಳ್ಳಲು ಸಿದ್ಧತೆ ನಡೆಸಲಾಗಿದೆ. ಮೊದಲ ಹಂತವಾಗಿ ಜಾಗವನ್ನು ಗುರುತಿಸಿ ಸರ್ವೇ ಕಾರ್ಯವನ್ನು ಕೈಗೊಳ್ಳಲು ನೌಕಾನೆಲೆ ಮುಂದಾಗಿದೆ. ಅಂಕೋಲಾ ತಹಶೀಲ್ದಾರ್ ಸೇರಿದಂತೆ ಸ್ಥಳೀಯ ಅಧಿಕಾರಿಗಳಿಗೆ ಸೂಚನೆಯನ್ನು ಸಹ ನೀಡಲಾಗಿದೆ. ಹೀಗಾಗಿ ನೌಕಾನೆಲೆಗೆ ಮತ್ತೆ ಭೂ ಸ್ವಾಧೀನಕ್ಕೆ ಮುಂದಾಗಿರೋದು ಗ್ರಾಮಸ್ಥರ ನಿದ್ದೆಗೆಡಿಸಿದ್ದು, ಮತ್ತೆ ನಿರಾಶ್ರಿತರಾಗುವ ಭಯದಿಂದ ಗ್ರಾಮಸ್ಥರು ಹಿಂದೇಟು ಹಾಕುತ್ತಿದ್ದಾರೆ.
ಅಂಕೋಲಾ ತಾಲೂಕಿನ ಬಿಳಿಹೊಯ್ಗೆ, ಬಾಸಗೋಡ, ಮಂಜಗುಣಿ, ಶಿವನಮಕ್ಕಿ, ಹೊನ್ನೇಬೈಲ್ ಗ್ರಾಮಗಳು ಇದೀಗ ನೌಕಾನೆಲೆ ವ್ಯಾಪ್ತಿಗೆ ಬರಲಿವೆ. ಈಗಾಗಲೇ ನೌಕಾನೆಲೆ ಭೂ ಸ್ವಾಧೀನ ಅಧಿಕಾರಿಗಳು ತಹಶೀಲ್ದಾರ್‌ಗೆ ಜಮೀನು ಸರ್ವೇ ನಡೆಸುವಂತೆ ಪತ್ರದ ಮೂಲಕ ತಿಳಿಸಿದ್ದಾರೆ. ಅಲ್ಲದೆ ಸದ್ಯ ವಿಮಾನ ನಿಲ್ದಾಣ ನಿರ್ಮಾಣಕ್ಕಾಗಿ ತಾಲೂಕಿನ ಅಲಗೇರಿ ಗ್ರಾಮದ ಬಹುಭಾಗ ಬಲಿಯಾಗಲಿದ್ದು, ಅಲ್ಲಿಯೂ ಸಹ ನೌಕಾನೆಲೆ ನಿರಾಶ್ರಿತರೇ ಮತ್ತೆ ಭೂಮಿ ಕಳೆದುಕೊಳ್ಳಲಿದ್ದಾರೆ.
ಒಂದು ಬಾರಿ ಇದ್ದ ಜಮೀನನ್ನು ದೇಶದ ರಕ್ಷಣಾ ಯೋಜನೆಗೆ ನೀಡಿ ಬೇರೆಡೆಗೆ ಬಂದು ಜೀವನ ಕಟ್ಟಿಕೊಳ್ಳಲಾಗಿದೆ. ಇದೀಗ ಮತ್ತೆ ಅದೇ ಕುಟುಂಬಗಳನ್ನ ನಿರಾಶ್ರಿತರನ್ನಾಗಿಸುವುದು ಸರಿಯಲ್ಲ. ಸಂಬಂಧಪಟ್ಟ ಅಧಿಕಾರಿಗಳು ಮತ್ತೊಮ್ಮೆ ಪರಿಶೀಲನೆ ನಡೆಸಬೇಕು ಅಂತಾ ಸಾರ್ವಜನಿಕರು ಒತ್ತಾಯಿಸಿದ್ದಾರೆ.