ಕಾರವಾರ(ಉತ್ತರ ಕನ್ನಡ): ತಡರಾತ್ರಿ ಮನೆಗೆ ನುಗ್ಗಿದ್ದ ನಾಗರ ಹಾವೊಂದನ್ನು ಹಿಡಿಯಲು ಮುಂದಾದಾಗ ಉರಗ ರಕ್ಷಕನಿಗೆ ಕಚ್ಚಿದ ಘಟನೆ ಹೊನ್ನಾವರ ತಾಲ್ಲೂಕಿನ ಗುಂಡಬಾಳ ಬಳಿ ನಡೆದಿದ್ದು, ಗಾಯಗೊಂಡ ಉರಗ ರಕ್ಷಕನನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿ ಆಸ್ಪತ್ರೆಗೆ ಕೊಂಡೊಯ್ಯಲಾಗಿದೆ. ಉರಗ ರಕ್ಷಕ ಅಬು ತಲಾ ಹಾವು ಕಚ್ಚಿ ಗಾಯಗೊಂಡವರು. ತಾಲ್ಲೂಕಿನ ಗುಂಡಬಾಳ ಸಮೀಪ ಮನೆಗೆ ಆಗಮಿಸಿದ ನಾಗರ ಹಾವು ಎಷ್ಟೇ ಪ್ರಯತ್ನಿಸಿದರು ಹೊರಗೆ ಹೋಗದ ಕಾರಣ ಉರಗ ರಕ್ಷಕ ಅಬು ತಲಾ ಅವರಿಗೆ ಮಾಹಿತಿ ನೀಡಿ ಕರೆಸಲಾಗಿತ್ತು. ಆದರೆ ಹಾವು ಹಿಡಿಯುವ ವೇಳೆ ಆಕಸ್ಮಿಕವಾಗಿ ಕೈ ಭಾಗಕ್ಕೆ ಕಚ್ಚಿದೆ. ಆದರೂ ಹಾವನ್ನು ಹಿಡಿದು ರಕ್ಷಣೆ ಮಾಡಿದ್ದಾರೆ. ನಂತರ ಅವರನ್ನು ತಾಲೂಕ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತಾದರೂ ಸ್ಥಿತಿ ಗಂಭೀರವಾದ ಹಿನ್ನೆಲೆಯಲ್ಲಿ ಉಡುಪಿಯ ಆದರ್ಶ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಇತ್ತೀಚಿಗೆ ಗದಗದಲ್ಲೂ ನಡೆದಿತ್ತು ಇಂಥಹ ಘಟನೆ.. ರಕ್ಷಣೆ ಕಾರ್ಯಾಚರಣೆ ವೇಳೆ ಉರಗ ತಜ್ಞರೊಬ್ಬರಿಗೆ ಹಾವು ಕಚ್ಚಿದ ಘಟನೆ ಇತ್ತೀಚೆಗೆ ಗದಗ ಜಿಲ್ಲೆಯ ನರಗುಂದ ತಾಲೂಕಿನ ಕೊಣ್ಣೂರ ಗ್ರಾಮದಲ್ಲಿ ನಡೆದಿತ್ತು. ಬುಡ್ನೇಸಾಬ್ ಸುರೇಬಾನ್ ಎಂಬುವವರಿಗೆ ಹಾವು ಕಚ್ಚಿತ್ತು. ಉರಗ ತಜ್ಞ ಬುಡ್ನೇಸಾಬ್ ಗ್ರಾಮದ ರಾಘವೇಂದ್ರ ಮಠದ ಅಡುಗೆ ಮನೆಯಲ್ಲಿ ಅವಿತು ಕುಳಿತಿದ್ದ ಹಾವನ್ನು ರಕ್ಷಣೆ ಮಾಡಲು ತೆರಳಿದ್ದ ವೇಳೆ ಏಕಾಏಕಿ ಹಾವು ದಾಳಿ ನಡೆಸಿತ್ತು. ಬಳಿಕ ಅವರನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಲಾಗಿತ್ತು.
ಉತ್ತರ ಕನ್ನಡ ಜಿಲ್ಲೆಯಲ್ಲಿನ ಇಂದಿನ ಇನ್ನಿತರ ಘಟನೆಗಳು.. ಈಜಲು ಹೋದ ಮೀನುಗಾರ ಯುವಕ ಸಾವು: ಅಘನಾಶಿನಿ ನದಿಗೆ ಈಜಲು ತೆರಳಿದ್ದ ಮೀನುಗಾರ ಯುವಕನೋರ್ವ ಮೃತಪಟ್ಟಿರುವ ಘಟನೆ ಕುಮಟಾದ ಮಿರ್ಜಾನ್ ತಾರೀಬಾಗಿಲು ಗ್ರಾಮದಲ್ಲಿ ನಡೆದಿದೆ. ಕುಮಟಾ ತಾಲ್ಲೂಕು ಮಿರ್ಜಾನ್ ತಾರೀಬಾಗಿಲದ ಕೃಷ್ಣ ಅಂಬಿಗ(24) ಮೃತ ದುರ್ದೈವಿ. ಅಘನಾಶಿನಿ ನದಿಗೆ ಈಜಲು ತೆರಳಿದ್ದ ಯುವಕ ನದಿ ನೀರಿನ ಸುಳಿಗೆ ಸಿಲುಕಿ ಸಾವನ್ನಪ್ಪಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಮನೆಗೆ ಒಬ್ಬನೇ ಮಗನಾಗಿದ್ದ ಈತ ಕುಟುಂಬಕ್ಕೆ ಆಸರೆಯಾಗಿದ್ದ. ಆದರೆ ಇದೀಗ ಆತನ ಸಾವಿನ ಸುದ್ದಿ ತಿಳಿದು ಕುಟುಂಬದ ಆಕ್ರಂದನ ಮುಗಿಲು ಮುಟ್ಟಿದೆ.
ಅಪ್ರಾಪ್ತ ಬಾಲಕಿ ಮೇಲೆ ಅತ್ಯಾಚಾರ ಬಂಧನ: ಯಲ್ಲಾಪುರ ವ್ಯಾಪ್ತಿಯಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದ ಆರೋಪಿಯನ್ನು ಪೊಲೀಸರು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಭಾಗವತಿಯ ರಫಿಕ್ ಸಿದ್ದಿ ಬಂಧಿಸಿರುವ ಆರೋಪಿಯಾಗಿದ್ದಾನೆ. ಈತ ನೊಂದ ಬಾಲಕಿಯನ್ನು ಪುಸಲಾಯಿಸಿ ಕರೆದುಕೊಂಡು ಹೋಗಿ ಅತ್ಯಾಚಾರ ಎಸಗಿದ್ದಾನೆ. ಈ ಬಗ್ಗೆ ಸಂತ್ರಸ್ತ ಬಾಲಕಿ ಕುಟುಂಬದವರು ದೂರು ನೀಡಿದ್ದು, ಆತನನ್ನು ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ: ಹಾವು ಕಡಿತದಿಂದ ಪವಾಡ ರೀತಿಯಲ್ಲಿ ಪಾರಾದ ಬಾಲಕಿ!: ವಿಡಿಯೋ ನೋಡಿ