ಭಟ್ಕಳ (ಉತ್ತರ ಕನ್ನಡ): ತಾಲೂಕಿನಲ್ಲಿ ಕಳೆದ ತಿಂಗಳು ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ಪ್ರದೇಶವಾದ ಮಾವಿನಕುರ್ವೆ ತಲಗೋಡ, ತೆಂಗಿನಗುಂಡಿಗೆ ಕೇಂದ್ರದ ಅಧಿಕಾರಿಗಳು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ. ಬುಧವಾರ ಜಿಲ್ಲಾ ಕೇಂದ್ರಕ್ಕೆ ಗೋವಾದಿಂದ ಆಗಮಿಸಿದ ತಂಡವೂ ಕಾರವಾರದಲ್ಲಿ ಉಡುಪಿ ಹಾಗೂ ಉತ್ತರಕನ್ನಡ ಜಿಲ್ಲಾಧಿಕಾರಿಗಳ ಉಪಸ್ಥಿತಿಯಲ್ಲಿ ಹಾನಿ ವಿವರದ ಬಗ್ಗೆ ಪರಿಶೀಲನಾ ಸಭೆ ನಡೆಸಿದ್ದರು.
ಗುರುವಾರ ಚಂಡಮಾರುತದಿಂದ ಹೆಚ್ಚು ಹಾನಿಯಾಗುವ ಜಿಲ್ಲೆಯ ಕರಾವಳಿ ಪ್ರದೇಶಗಳಿಗೆ ರಾಜ್ಯ ವಿಪತ್ತು ನಿರ್ವಹಣ ಪ್ರಾಧಿಕಾರದ ಆಯುಕ್ತ ಮನೋಜ ರಾಜ್ ನೇತೃತ್ವದಲ್ಲಿ ಆಗಮಿಸಿದ ಇಂಟರ್ ಮಿನಿಸ್ಟರಿಯಲ್ ಸೆಂಟರ್ ಟೀಂ ಪರಿಶೀಲನೆ ನಡೆಸಿತು.
ಭಟ್ಕಳ ತಾಲೂಕಿನಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿಗೊಳಗಾದ ತಲಗೋಡ, ತೆಂಗಿನಗುಂಡಿ, ಹೆರ್ತಾರ, ಜಾಲಿ ಕಡಲತೀರ ಪ್ರದೇಶಗಳನ್ನು ವೀಕ್ಷಿಸಲಾಯಿತು. ಚಂಡಮಾರುತದಿಂದ ಆದ ಕಡಲ್ಕೊರೆತ, ರಸ್ತೆ ಹಾನಿ ಮನೆಗಳ ಕುಸಿತ ಹಾಗೂ ದೋಣಿಗಳಿಗೆ ಆದ ಹಾನಿಯ ಬಗ್ಗೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಕೇಂದ್ರ ತಂಡಕ್ಕೆ ವಿವರಣೆ ನೀಡಿದರು.
ಬಂದರು ಇಲಾಖೆ ಉ.ಕ. ಜಿಲ್ಲೆಗೆ ಈಗಾಗಲೇ 4.5 ಕಿ.ಮೀ ಶಾಶ್ವತ ತಡೆಗೋಡೆ ನಿರ್ಮಾಣಕ್ಕೆ ಕ್ರಿಯಾ ಯೋಜನೆ ರೂಪಿಸಿದ್ದು, ಅದರಲ್ಲಿ ಭಟ್ಕಳವೂ ಸೇರಿದೆ. ಈ ಕುರಿತು ಕೂಡಲೇ ಅನುಮೋದನೆ ದೊರಕಿಸಿಕೊಡುವ ಕುರಿತು ಕೇಂದ್ರದ ತಂಡಕ್ಕೆ ಮನವರಿಕೆ ಮಾಡಲಾಗಿದೆ. ಹೀಗಾಗಿ, ಹಾನಿಯ ಮೊತ್ತ, ರಾಜ್ಯ ಸರ್ಕಾರದಿಂದ ನೀಡಿದ ಅನುದಾನ ಹಾಗೂ ಮುಂದೆ ಆಗಬೇಕಾದ ಕೆಲಸಗಳ ಕುರಿತು ಕೇಂದ್ರದ ಅಧಿಕಾರಿಗಳು ಸಂಪೂರ್ಣ ವಿವರಣೆ ಪಡೆದುಕೊಂಡರು.
ಈಟಿವಿ ಭಾರತದೊಂದಿಗೆ ಮಾತನಾಡಿದ ಕೇಂದ್ರ ಗೃಹ ಸಚಿವಾಲಯದ ಅಧಿಕಾರಿ ಸುಶೀಲ್ ಪಾಲ್, ತೌಕ್ತೆ ಚಂಡಮಾರುತ ಹಾನಿಯನ್ನು ಮೌಲ್ಯಮಾಪನ ಮಾಡಲು ರಾಜ್ಯ ಸರ್ಕಾರದ ನಿರ್ದೇಶನದಂತೆ ಕೇಂದ್ರದ ತಂಡ ಭಟ್ಕಳ ತಾಲೂಕಿಗೆ ಭೇಟಿ ನೀಡಿದೆ. ಹಾನಿಯ ಬಗ್ಗೆ ಮಾಹಿತಿಯನ್ನು ಕ್ರೋಢೀಕರಿಸಿ ಪರಿಹಾರ ಕುರಿತಂತೆ ವರದಿ ನೀಡಲಿದ್ದು, ಇದರ ಆಧಾರದಲ್ಲಿ ಸರ್ಕಾರ ಕ್ರಮ ಕೈಗೊಳ್ಳಲಿದೆ ಎಂದರು.
ಇದೇ ವೇಳೆ ಜಿಲ್ಲಾಧಿಕಾರಿ ಮುಲೈ ಮುಗಿಲನ್ ಮಾತನಾಡಿ, ರಾಜ್ಯ ಹಾಗೂ ಕೇಂದ್ರ ವಿಪತ್ತು ಪರಿಹಾರ ನಿಧಿ ಮಾರ್ಗಸೂಚಿಯಂತೆ 27.71 ಕೋಟಿ ಮತ್ತು ಸಮುದ್ರ ಕೊರೆತದಿಂದಾಗಿ 77.40 ಕೋಟಿ ರೂ ಸೇರಿದಂತೆ ಒಟ್ಟು ಅಂದಾಜು 105.11 ಕೋಟಿ ಮೌಲ್ಯದ ಆಸ್ತಿ ನಷ್ಟವಾಗಿದೆ. 164.58 ಹೆಕ್ಟೇರ್ ಕೃಷಿ ಭೂಮಿ, 165 ಮನೆ, 33 ಸೇತುವೆಗಳು ಭಾಗಶ 230 ಬೋಟ್‌ಗಳು, ಶಾಲಾ ಹಾಗೂ ಸರ್ಕಾರಿ ಕಟ್ಟಡಗಳು ಸೇರಿದಂತೆ 22 ಕಟ್ಟಡಗಳು, ಭಟ್ಕಳ ಹಾಗೂ ಕುಮಟಾ ತಾಲೂಕಿನಲ್ಲಿ ಎರಡು ಜೀವಹಾನಿಗಳು ತೌಕ್ತೆ ಚಂಡಮಾರುತದಿಂದಾಗಿ ಆಗಿವೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲಕ್ಕಿ ಲಾಟರಿ ಮೂಲಕ 16 ಕೋಟಿ ರೂ.ದುಬಾರಿ ಚಿಕಿತ್ಸೆ ಪಡೆದ ಕರ್ನಾಟಕದ ಮಗು!