ಕಾರವಾರ: ಗೇರುಬೀಜ ಸಂಸ್ಕರಣಾ ಪ್ಯಾಕ್ಟರಿಯನ್ನು ಏಕಾಏಕಿ ಬಂದ್ ಮಾಡಿ ಕಳೆದ ಒಂದು ವಾರದಿಂದ ಕಾರ್ಮಿಕರ ಪ್ರತಿಭಟನೆ ಎದುರಿಸುತ್ತಿರುವ ಕುಮಟಾದ ರಿಲೇಬಲ್ ಕ್ಯಾಶ್ಯೂ ಕಂಪನಿಯು ತನ್ನ ಹಠಮಾರಿ ಧೋರಣೆ ಮುಂದುವರಿಸಿದ್ದು, ಪರಿಣಾಮ ಕಾರ್ಮಿಕರು ಹಾಗೂ ಕಂಪನಿ ಅಧಿಕಾರಿಗಳ ಜತೆ ಕಾರ್ಮಿಕ ಇಲಾಖೆ ನಡೆಸಿದ ಸಂಧಾನ ಸಭೆ ವಿಫಲಗೊಂಡಿದ್ದು, ಪರಿಣಾಮ ಕಾರ್ಮಿಕರು ಧರಣಿ ಮುಂದುವರೆಸಿದ್ದಾರೆ.
ಫ್ಯಾಕ್ಟರಿಯಲ್ಲಿ 8 ಗಂಟೆ ಕಾಲಾವಧಿಯಲ್ಲಿ ದಿನಕ್ಕೆ ನಡೆಯುತ್ತಿದ್ದ 3 ಪಾಳಿಗಳನ್ನು ಇತ್ತೀಚೆಗೆ ಆಡಳಿತ ಮಂಡಳಿಯವರು 2 ಪಾಳಿಯನ್ನು ನಡೆಸಲು ಚಿಂತನೆ ನಡೆಸಿದ್ದಾರೆ. ಈ ಬಗ್ಗೆ ಯಾವ ಕಾರ್ಮಿಕರಿಗೂ ತಿಳಿಸದೇ ಕೆ.ಜಿ ಲೆಕ್ಕದಲ್ಲಿ ಕೆಲಸವನ್ನು ನೀಡುವ ಬಗ್ಗೆ ನೋಟೀಸ್ ಬೋರ್ಡಿಗೆ ಅಂಟಿಸಿದ್ದರು. ಇದರಿಂದ ಗೊಂದಲಕ್ಕೀಡಾದ ಕಾರ್ಮಿಕರು ಆಡಳಿತ ಮಂಡಳಿಯೊಂದಿಗೆ ಚರ್ಚೆಗೆ ಮುಂದಾಗಿದ್ದು, ಆದರೆ ಇದಕ್ಕೆ ಅವಕಾಶ ನೀಡದೇ ನಿಮಗೆ ಆದರೆ ಕೆಲಸ ಮಾಡಿ. ಇಲ್ಲವಾದರೆ ಬಿಟ್ಟು ಹೋಗಬಹುದೆಂದು ಸೂಚಿಸಿದ್ದಾರೆ.
ಆದರೆ ಈ ಹಠಮಾರಿ ಧೋರಣೆಗೆ ಕಾರ್ಮಿಕರು ಕಳೆದ ಒಂದು ವಾರದಿಂದ ನಿರಂತರವಾಗಿ ಧರಣಿ ನಡೆಸಿ ತಮಗೆ ನ್ಯಾಯ ಒದಗಿಸುವಂತೆ ಕಂಪನಿ ಮಾಲೀಕರು ಹಾಗೂ ಕಾರ್ಮಿಕ ಇಲಾಖೆ ಅಧಿಕಾರಿಗಳಿಗೆ ಒತ್ತಾಯಿಸಿದ್ದರು.
ಅದರಂತೆ ರಿಲೇಬಲ್ ಕ್ಯಾಶ್ಯೂ ಇಂಡಸ್ಟ್ರೀಸ್ ಮಾಲೀಕರು ಮತ್ತು ಕಾರ್ಮಿಕರ ನಡುವೆ ಸಂಧಾನ ಮಾತುಕತೆ ನಡೆಸಿ, ಕಾರ್ಮಿಕ ಇಲಾಖೆ ಅಧಿಕಾರಿಗಳು ಸಭೆಯ ಮಾತಿನ ಪ್ರಕಾರ ಸೆಪ್ಟೆಂಬರ್ 12ರಂದು ಪುನಃ ಪ್ಯಾಕ್ಟರಿ ಕಾರ್ಯಾರಂಭ ಮಾಡಲು ಸೂಚಿಸಿದ್ದರು.
ಆದರೆ ಸಂಧಾನದ ಬಳಿಕ ಇದ್ಯಾವುದನ್ನೂ ಕಿವಿಯ ಮೇಲೆ ಹಾಕಿಕೊಳ್ಳದ ರಿಲೇಬಲ್ ಆಡಳಿತ ವರ್ಗದವರು ಅಲ್ಲಿಂದ ಜಾಗವನ್ನು ಖಾಲಿ ಮಾಡಿದವರು ಮತ್ತೆ ಯಾರೂ ಕೂಡ ಪ್ಯಾಕ್ಟರಿಯ ಕಡೆಗೆ ಬಂದಿರಲಿಲ್ಲ. ಆದರೆ ಕಾರ್ಮಿಕರು ಮಾತ್ರ ಕೆಲಸಕ್ಕೆ ಬರುವುದನ್ನು ನಿಲ್ಲಿಸಿಲ್ಲ.
ಕಂಪನಿಯ ಮಾಲಿಕರು ಸಂಧಾನ ಸಭೆಯಲ್ಲಿನ ಮಾತನ್ನು ತಿರಸ್ಕರಿಸುವ ಮೂಲಕ ಕಾನೂನನ್ನು ಅವಮಾನಿಸಿದ್ದಾರೆ. ಮುಂದಿನ ಒಂದೆರಡು ದಿನದಲ್ಲಿ ಕಂಪನಿಯನ್ನು ಪ್ರಾರಂಭಗೊಳಿಸದಿದ್ದಲ್ಲಿ ಮುಂದಿನ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದು ಉತ್ತರಕನ್ನಡ ಜಿಲ್ಲೆ ಕ್ಯಾಶ್ಯೂ ಇಂಡಸ್ಟ್ರೀ ಎಂಪ್ಲಾಯೀಸ್ ಯೂನಿಯನ್ ಅಧ್ಯಕ್ಷ ತಿಲಕ ಗೌಡ ಸೇರಿದಂತೆ ಸಂಘದ ಪದಾಧಿಕಾರಿಗಳು ಎಚ್ಚರಿಸಿದ್ದಾರೆ.