ಕಾರವಾರ: ಉತ್ತರ ಕನ್ನಡದ ಯಲ್ಲಾಪುರ ವಿಧಾನಸಭಾ ಕ್ಷೇತ್ರಕ್ಕೆ ಡಿಸೆಂಬರ್ 5ರಂದು ಉಪಚುನಾವಣೆ ನಡೆಯಲಿದ್ದು, ಇಂದಿನಿಂದಲೇ ಜಿಲ್ಲೆಯಾದ್ಯಂತ ಮಾದರಿ ನೀತಿ ಸಂಹಿತೆ ಜಾರಿಯಾಗಲಿದೆ ಎಂದು ಜಿಲ್ಲಾಧಿಕಾರಿ ಡಾ. ಹರೀಶಕುಮಾರ್ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಯಲ್ಲಾಪುರ-ಮುಂಡಗೋಡ ಕ್ಷೇತ್ರಕ್ಕೆ ಉಪಚುನಾವಣೆ ಘೋಷಣೆಯಾಗಿದ್ದು, ಇಂದಿನಿಂದ ನಾಮಪತ್ರ ಸಲ್ಲಿಸಬಹುದು. ನಾಮಪತ್ರ ಸಲ್ಲಿಕೆಗೆ ನವೆಂಬರ್ 18 ಕೊನೆಯ ದಿನವಾಗಿದೆ. ಡಿ.9ರಂದು ಮತ ಎಣಿಕೆ ಜರುಗಿ ಫಲಿತಾಂಶ ಪ್ರಕಟಗೊಳ್ಳಲಿದ್ದು, ಡಿ.11ಕ್ಕೆ ನೀತಿ ಸಂಹಿತೆ ಕೊನೆಗೊಳ್ಳಲಿದೆ ಎಂದರು.
ಯಲ್ಲಾಪುರ-ಮುಂಡಗೋಡ ವ್ಯಾಪ್ತಿಯಲ್ಲಿ ಒಟ್ಟು 231 ಮತಗಟ್ಟೆಗಳಿದ್ದು, 87,899 ಪುರುಷರು, 84,647 ಮಹಿಳೆಯರು, ಇತರೆ ಒಬ್ಬರಿದ್ದಾರೆ. ಒಟ್ಟು 1,72,547 ಮತದಾರರಿದ್ದಾರೆ. ಮತದಾರರಿಗೆ ಅನುಕೂಲವಾಗುವ ಸಲುವಾಗಿ ಮತಗಟ್ಟೆಗಳಲ್ಲಿ ಕುಡಿಯುವ ನೀರು, ವಿದ್ಯುತ್, ಬೆಳಕು, ಶೌಚಾಲಯ, ರ‍್ಯಾಂಪ್ ಸೇರಿದಂತೆ ಕನಿಷ್ಠ ಮೂಲ ಸೌಕರ್ಯ ಒದಗಿಸಲಾಗುತ್ತದೆ ಎಂದು ಹೇಳಿದರು.
ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಪ್ರಕಾಶ್ ದೇವರಾಜು ಮಾತನಾಡಿ, ಜಿಲ್ಲೆಯಲ್ಲಿ 15 ಚೆಕ್‌ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಹೆಚ್ಚವರಿಯಾಗಿ ರಾಜ್ಯ ಮೀಸಲು ಪೊಲೀಸ್ (ಕೆಎಸ್‌ಆರ್‌ಪಿ) 3 ತುಕಡಿ ಹಾಗೂ ಪ್ಯಾರಾ ಮಿಲಿಟರಿ 2 ತುಕಡಿಗಳಿಗಾಗಿ ಕೇಳಿಕೊಂಡಿದ್ದೇವೆ. ಈ ಹಿಂದಿನ ಲೋಕಸಭೆ ಹಾಗೂ ವಿಧಾನಸಭೆ ಚುನಾವಣೆಗಳ ಆಧಾರದ ಮೇಲೆ ಸೂಕ್ಷ್ಮ ಹಾಗು ಅತಿಸೂಕ್ಷ್ಮ ಮತಗಟ್ಟೆಗಳನ್ನು ಗುರುತಿಸುವ ಪ್ರಕ್ರಿಯೆ ನಡೆಯುತ್ತಿದೆ ಎಂದು ತಿಳಿಸಿದರು.