ಕಾರವಾರ (ಉತ್ತರಕನ್ನಡ): ಕಾಡುಪ್ರಾಣಿ ಬೇಟೆಗೆ ಇಟ್ಟಿದ್ದ ಕೈಬಾಂಬ್ ಸ್ಫೋಟಗೊಂಡು ಹಸುವಿನ ಬಾಯಿ ಛಿದ್ರಗೊಂಡಿರುವ ಘಟನೆ ಮುಂಡಗೋಡ ತಾಲೂಕಿನ ಸನವಳ್ಳಿ ಜಲಾಶಯದ ಬಳಿ ನಡೆದಿದೆ.
ಮುಂಡಗೋಡದ ಸನವಳ್ಳಿ ಪ್ಲಾಟಿನ ಅಪ್ಪು ನಾರಾಯಣಸ್ವಾಮಿ ಎಂಬವರಿಗೆ ಸೇರಿದ ಆಕಳು ಜಲಾಶಯದ ಹತ್ತಿರ ಮೇಯುತ್ತಿದ್ದಾಗ ನೆಲದಲ್ಲಿ ಬಿದ್ದಿದ್ದ ಕೈಬಾಂಬ್‌ನ್ನು ಆಹಾರವೆಂದು ತಿನ್ನಲು ಮುಂದಾಗಿದೆ. ಈ ವೇಳೆ ಕೈಬಾಂಬ್ ಸ್ಫೋಟಗೊಂಡಿದೆ. ಪರಿಣಾಮ ಆಕಳಿನ ಬಾಯಿ ಸಂಪೂರ್ಣ ಛಿದ್ರಗೊಂಡಿದೆ. ಅದೃಷ್ಟವಶಾತ್ ಕಟ್ಟಿಗೆ ತರಲೆಂದು ಕಾಡಿಗೆ ತೆರಳಿದ್ದ ಮಹಿಳೆಯರು ಸ್ವಲ್ಪದರಲ್ಲೇ ಈ ಘಟನೆಯಿಂದ ಪಾರಾಗಿದ್ದಾರೆ.
ಅರಣ್ಯ ಇಲಾಖೆ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮತ್ತೊಂದು ಜೀವಂತ ಕೈಬಾಂಬ್ ಪತ್ತೆ ಮಾಡಿದ್ದಾರೆ. ಇಂತಹ ದುಷ್ಕೃತ್ಯದಲ್ಲಿ ತೊಡಗುವ ಬೇಟೆಗಾರರ ಮೇಲೆ ನಿಗಾ ಇಡುವಂತೆ ಮತ್ತು ತಪ್ಪಿತಸ್ಥರನ್ನು ಪತ್ತೆ ಹಚ್ಚಿ ಬಂಧಿಸುವಂತೆ ಸ್ಥಳೀಯರು ಆಗ್ರಹಿಸಿದ್ದಾರೆ.
ಈ ಬಗ್ಗೆ ಮುಂಡಗೋಡ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇದನ್ನೂ ಓದಿ: ಮದುವೆಯಾದ 10 ತಿಂಗಳಲ್ಲೇ ನವವಿವಾಹಿತೆ ಶವವಾಗಿ ಪತ್ತೆ: ಪತಿ-ಅತ್ತೆಯ ಮೇಲೆ ಗುಮಾನಿ