ಕಾರವಾರ (ಉತ್ತರ ಕನ್ನಡ): ದಿನ ಕಳೆದಂತೆ ಚುನಾವಣಾ ಕಣ ರಂಗೇರತೊಡಗಿದೆ. ಕಾರವಾರ-ಅಂಕೋಲಾ ಕ್ಷೇತ್ರದಲ್ಲಿಯೂ ಆರಂಭದಲ್ಲಿ ಕಾಂಗ್ರೆಸ್ನಲ್ಲಿ ಕಾಣಿಸಿಕೊಂಡಿದ್ದ ಬಂಡಾಯದ ಬಿಸಿ ಇದೀಗ ಬಿಜೆಪಿಗೂ ತಟ್ಟಿದೆ. ಸುಲಭದ ಗೆಲುವಿನ ಲೆಕ್ಕಾಚಾರದಲ್ಲಿದ್ದ ಶಾಸಕಿ ರೂಪಾಲಿ ನಾಯ್ಕಗೆ ತಮ್ಮದೆ ಪಕ್ಷದವರು ಬಂಡಾಯ ಸಾರಿರುವುದು ಇದೀಗ ಬಿಜೆಪಿಗೆ ನುಂಗಲಾರದ ತುತ್ತಾಗಿ ಪರಿಮಿಸಿದೆ.
ಕಾಂಗ್ರೆಸ್ ಟಿಕೆಟ್ ಕೈ ತಪ್ಪಿದ ಬೆನ್ನಲ್ಲೇ ಆಕಾಂಕ್ಷಿಯಾಗಿದ್ದ ಚೈತ್ರಾ ಕೋಠಾರಕರ್ ಪಕ್ಷ ತ್ಯಜಿಸಿದರು. ಬಳಿಕ ಜೆಡಿಎಸ್ ಸೇರ್ಪಡೆಯಾಗುವ ಮೂಲಕ ಈ ಬಾರಿ ಅಭ್ಯರ್ಥಿಯಾಗಿ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದಾರೆ. ಆದರೆ ಬಿಜೆಪಿಯಲ್ಲಿ ಹಲವು ಆಕಾಂಕ್ಷಿಗಳು ಇದ್ದರೂ ಬಂಡಾಯ ಏಳುವುದಿಲ್ಲ ಎಂದೇ ಹೇಳಲಾಗುತ್ತಿತ್ತು. ಆದರೆ ಪ್ರಮುಖ ರಾಜಕೀಯ ಬೆಳವಣಿಗೆಯಲ್ಲಿ ಪ್ರಮುಖ ಟಿಕೆಟ್ ಆಕಾಂಕ್ಷಿಯಾಗಿದ್ದ ಗಂಗಾಧರ ಭಟ್, ಇದೀಗ ನಾನು ಬಿಜೆಪಿ ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಡಿದ್ದಾರೆ.
ಇದೇ ಸಂದರ್ಭದಲ್ಲಿ ಮಾತನಾಡಿದ ಗಂಗಾಧರ ಭಟ್, ಕ್ಷೇತ್ರದಲ್ಲಿ ಬಿಜೆಪಿಯನ್ನು ಕಟ್ಟಿ ಬೆಳಸಿ ಮೊದಲ ಬಾರಿ ಪಕ್ಷ ಗೆಲ್ಲುವಂತೆ ಮಾಡಿರುವ ನನ್ನನ್ನು ಇಂದು ಮೂಲೆಗುಂಪು ಮಾಡಲಾಗಿದೆ. ಕ್ಷೇತ್ರದಲ್ಲಿ ಆಡಳಿತ ವಿರೋಧಿ ಅಲೆ ಇರುವುದರಿಂದ ನಿಮಗೆ ಟಿಕೆಟ್ ಸಿಗುವ ಸಾಧ್ಯತೆ ಹೆಚ್ಚಾಗಿದೆ. ನೀವು ಸಿದ್ಧತೆ ಮಾಡಿಕೊಳ್ಳುವಂತೆ ತಿಳಿಸಿದ ಪಕ್ಷದ ಹಿರಿಯರು ಇದೀಗ ಹಾಲಿ ಶಾಸಕಿ ರೂಪಾಲಿ ನಾಯ್ಕ ಅವರಿಗೆ ಟಿಕೆಟ್ ನೀಡಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಾನು ಬಿಜೆಪಿ ಹಾಗೂ ಪ್ರಧಾನಿ ನರೇಂದ್ರ ಮೋದಿ ಪಕ್ಕಾ ಅಭಿಮಾನಿಯಾಗಿದ್ದು ಇತರೆ ಪಕ್ಷದವರು ತಮ್ಮ ಪಕ್ಷಕ್ಕೆ ಆಹ್ವಾನ ಕೂಡ ನೀಡಿದ್ದರು. ಆದರೂ ನಾನು ತೆರಳಿಲ್ಲ. ಇದು ತಮ್ಮ ಕೊನೆಯ ಚುನಾವಣೆಯಾದ ಕಾರಣ ಅವಕಾಶ ನೀಡುವಂತೆ ಕೇಳಿದರೂ ಕೊನೆಗಳಿಗೆಯಲ್ಲಿ ಟಿಕೆಟ್ ತಪ್ಪಿಸಲಾಗಿದೆ. ಇದೇ ಕಾರಣಕ್ಕೆ ಪ್ರಬಲವಾಗಿರುವ ನಮ್ಮ ಸಮುದಾಯದ ಜನರು ಹಾಗೂ ಶಾಸಕರ ಆಡಳಿತ ನೋಡಿರುವ ಸ್ಥಳೀಯ ಜನರು ಬಂಡಾಯವಾಗಿ ಸ್ಪರ್ಧಿಸುವಂತೆ ಒತ್ತಾಯಿಸಿದ್ದರಿಂದ ಸ್ಪರ್ಧೆ ಮಾಡಿದ್ದು, ಎಷ್ಟೇ ಒತ್ತಡ ಬಂದರೂ ವಾಪಸ್ಸ್ ಪಡೆಯುವ ಮಾತೇ ಇಲ್ಲ ಎಂದು ಗಂಗಾಧರ್ ಭಟ್ ಹೇಳಿದರು.
ಇನ್ನು ಮತ್ತೊಬ್ಬ ಬಿಜೆಪಿ ಬಂಡಾಯ ಅಭ್ಯರ್ಥಿ ಎಂದು ಘೋಷಣೆ ಮಾಡಿಕೊಂಡಿರುವ ಕುಮಾರ್ ನಾಯ್ಕ ನಿನ್ನೆ 500 ಕ್ಕೂ ಹೆಚ್ಚು ಜನರೊಂದಿಗೆ ಚುನಾವಣಾಧಿಕಾರಿ ಕಚೇರಿಗೆ ತೆರಳಿ ತಮ್ಮ ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಬಳಿಕ ಮಾತನಾಡಿ ನಾನು ಬಿಜೆಪಿಯ ಕಟ್ಟಾ ಅಭಿಮಾನಿಯಾಗಿದ್ದೇನೆ. ಆದರೆ ನಮ್ಮದೆ ಸರ್ಕಾರ ಇದ್ದು ಸ್ಥಳೀಯ ಶಾಸಕರು ನಮ್ಮವರೇ ಇದ್ದರೂ ಕೂಡ ನಮ್ಮ ಯಾವುದೇ ಕೆಲಸವಾಗುತ್ತಿರಲಿಲ್ಲ. ಕೇವಲ ರಸ್ತೆ ಮಾಡಿದರೆ ಅಭಿವೃದ್ಧಿಯಲ್ಲ. ಜನರ ಸಂಕಷ್ಟ ಕೇಳುವ ಶಾಸಕರು ಬೇಕಾಗಿದ್ದಾರೆ. ಇದೇ ಕಾರಣಕ್ಕೆ ಸ್ಥಳೀಯರು ಹಾಗೂ ಬಿಜೆಪಿ ಕಾರ್ಯಕರ್ತರು ಒತ್ತಾಯ ಮಾಡಿದ್ದರಿಂದ ಸ್ಪರ್ಧೆ ಮಾಡುತ್ತಿರುವುದಾಗಿ ಹೇಳಿದರು.
ಇದನ್ನೂ ಓದಿ :ಕೊನೆಯ ದಿನ ನಾಮಪತ್ರ ಜಾತ್ರೆ: ಗುರುವಾರ 1934 ಸೇರಿ ಒಟ್ಟು 5102 ಉಮೇದುವಾರಿಕೆ ಸಲ್ಲಿಕೆ