ಶಿರಸಿ: ಅಧಿಕಾರ, ಹಣಕ್ಕಾಗಿ ಓಡಿ ಹೋದವರು ಈಗ ಕಾಂಗ್ರೆಸ್ ಅಧಿಕಾರಕ್ಕೆ ಬರುತ್ತಿದ್ದಂತೆ ಇತ್ತ ಓಡಿ ಬರುವುದು ಯಾವ ರೀತಿಯ ಭಂಡ ರಾಜಕೀಯ ಎಂದು ಶಾಸಕ ಭೀಮಣ್ಣ ನಾಯ್ಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇಲ್ಲಿನ ಕೆರೆಗುಂಡಿ ರಸ್ತೆಯ ಮಾರುತಿ ದೇವಾಲಯಕ್ಕೆ ಶನಿವಾರ ಭೇಟಿ ನೀಡಿದ ವೇಳೆ ಪತ್ರಕರ್ತರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ಹಣ, ಅಧಿಕಾರಕ್ಕಾಗಿ ಪಕ್ಷಾಂತರಿಗಳಾದವರು ಅಲ್ಲಿಂದ ಮತ್ತೆ ಅಧಿಕಾರ, ಹಣಕ್ಕಾಗಿ ಕಾಂಗ್ರೆಸ್ಗೆ ಬರುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದರು.
ನಾನು ಅವರ ವಿರುದ್ಧ ಚುನಾವಣೆಗೆ ನಿಂತಿದ್ದೆ. ಆಗ ಹೆಬ್ಬಾರ್ ಯಾರ ಬೆಂಬಲ ಪಡೆದರು, ಯಾರ ಸಹಕಾರದಿಂದ ಆರಿಸಿ ಬಂದರು ಎಂಬುದನ್ನು ವಿಶ್ಲೇಷಿಸಬೇಕಿದೆ. ಅವರು ಬರುವಾಗ ಅಲ್ಲಿನ ಮತದಾರರಿಗೆ ಕಾರ್ಯಕರ್ತರಿಗೆ ಕೇಳಿ ಬರಬೇಕಾಗುತ್ತದೆ. ಅವರು ಕಾಂಗ್ರೆಸ್ ಬರುವುದರಲ್ಲಿ ನನ್ನ ವಿರೋಧವಿದೆ. ಬನವಾಸಿ ಏತ ನೀರಾವರಿ ಯಾವ ಹಂತದಲ್ಲಿದೆ? ಯಾಕೆ ಪೂರ್ಣವಾಗಿಲ್ಲ? ಸಚಿವರಾಗಿಯೂ ಏಕೆ ಮುಗಿಸಲಾಗಿಲ್ಲ? ಕ್ಷೇತ್ರದ ಅಭಿವೃದ್ಧಿ ಏಕೆ ಹಿನ್ನಡೆಯಾಗಿದೆ? ಎಂಬೆಲ್ಲ ವಿಷಯಗಳ ಬಗ್ಗೆ ಕಾಂಗ್ರೆಸ್ ಹೈಕಮಾಂಡ್ ಕೂಲಂಕಷವಾಗಿ ವಿಚಾರಿಸಿಯೇ ಮುಂದಿನ ಹೆಜ್ಜೆಯಿಡುತ್ತದೆ ಎನ್ನುವ ವಿಶ್ವಾಸವಿದೆ ಎಂದು ತಿಳಿಸಿದರು.
ಇದೇ ವಿಚಾರವಾಗಿ ಎರಡು ದಿನಗಳ ಹಿಂದೆ ಪ್ರತಿಕ್ರಿಯೆ ನೀಡಿದ್ದ ಅವರು, ಬಿಜೆಪಿ ಸೇರಿದ ಶಾಸಕರು ಕಾಂಗ್ರೆಸ್ಗೆ ತೆರಳುತ್ತಾರೆ ಎಂಬ ಸುದ್ದಿಯನ್ನು ಮಾಧ್ಯಮದಲ್ಲಿ ನೋಡಿ ತಿಳಿದುಕೊಂಡೆ. ಯಾಕೆ ಹೀಗೆ ಬಂತು ಎಂಬ ಬಗ್ಗೆ ಮಾಹಿತಿ ಇಲ್ಲ. ಅಲ್ಲದೇ ಈ ಸಂಬಂಧ ಯಾವುದೇ ಸಭೆ, ಚರ್ಚೆ ಚಟುವಟಿಕೆಗಳಲ್ಲಿ ಭಾಗವಹಿಸಿಲ್ಲ. ಆದರೂ ಈ ಬಗ್ಗೆ ಪ್ರಸ್ತಾಪವಾಗಿದೆ. ಕ್ಷೇತ್ರದ ಜನರನ್ನು ಬಿಟ್ಟು ರಾಜಕಾರಣ ಮಾಡಲು ಆಗುವುದಿಲ್ಲ. ನಮ್ಮ ಕ್ಷೇತ್ರದ ಮುಖಂಡರೊಂದಿಗೆ ಚರ್ಚಿಸದೇ ಯಾವುದೇ ನಿರ್ಣಯವನ್ನ ತೆಗೆದುಕೊಳ್ಳಲು ಆಗುವುದಿಲ್ಲ. ಕಾಂಗ್ರೆಸ್ ಸೇರುವ ಕಾಲ ನಿರ್ಣಯ ಆಗಿಲ್ಲ. ಈ ಸಂಬಂಧ ಊಹಾಪೋಹಗಳಿಗೆ ಉತ್ತರ ಕೊಡುವ ಅವಶ್ಯಕತೆ ನನಗಿಲ್ಲ ಎಂದು ಹೇಳಿದ್ದರು.
ಬಿಜೆಪಿ ಹಿರಿಯ ನಾಯಕ, ಮಾಜಿ ಸಿಎಂ ಬಿ ಎಸ್ ಯಡಿಯೂರಪ್ಪ ಅವರ ನಿವಾಸದಲ್ಲಿ ನಿನ್ನೆ ಇದೇ ವಿಚಾರವಾಗಿ ಸಭೆ ನಡೆದಿತ್ತು. ಯಡಿಯೂರಪ್ಪ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಆಪರೇಷನ್ ಹಸ್ತ ವಿಷಯವಾಗಿ ಚರ್ಚೆ ನಡೆದಿತ್ತು. ಸಭೆಯಲ್ಲಿ ಕಾಂಗ್ರೆಸ್ಗೆ ವಾಪಸಾಗುತ್ತಾರೆ ಎಂದು ಚರ್ಚೆಯಾಗುತ್ತಿರುವ ಎಸ್.ಟಿ.ಸೋಮಶೇಖರ್ ಹಾಗೂ ಭೈರತಿ ಬಸವರಾಜ ಗೈರಾಗಿದ್ದರು. ಗೋಪಾಲಯ್ಯ ಹಾಗೂ ಮುನಿರತ್ನ ಸಭೆಯಲ್ಲಿ ಭಾಗಿಯಾಗಿದ್ದರು.
ಸಭೆ ಬಳಿಕ ಮಾತನಾಡಿದ್ದ ಬಿಎಸ್ವೈ, ಬಿಜೆಪಿಯ ಯಾವೊಬ್ಬ ಶಾಸಕರೂ ಪಕ್ಷ ತೊರೆಯಲ್ಲ, ಕಾಂಗ್ರೆಸ್ ಸೇರಲ್ಲ ಎಂದು ಸ್ಪಷ್ಟಪಡಿಸಿದ್ದರು. ಪಕ್ಷದಲ್ಲಿ ಎಲ್ಲರೂ ಒಟ್ಟಾಗಿದ್ದೇವೆ. ಆಪರೇಷನ್ ಹಸ್ತ ವದಂತಿ ಮಾತ್ರ ಎಂದು ಹೇಳಿದ್ದರು.
ಇದನ್ನೂ ಓದಿ: ಬಿಜೆಪಿಯಲ್ಲಿ ಕಿರುಕುಳ ಅನುಭವಿಸುವವರು ಕಾಂಗ್ರೆಸ್ಗೆ ಬರಬಹುದು: ಗೃಹ ಸಚಿವ ಪರಮೇಶ್ವರ ಸ್ವಾಗತ