ಭಟ್ಕಳ: ರಂಜಾನ್ ಹಬ್ಬದ ಪ್ರಯುಕ್ತ ಪ್ರತಿ ವರ್ಷ ಮಾರುಕಟ್ಟೆ ಹಾಕಲಾಗುತ್ತದೆ. ಕಳೆದ 2 ವರ್ಷಗಳಿಂದ ಕೊರೊನಾ ವೈರಸ್ ಮತ್ತು ಲಾಕ್ಡೌನ್ ಕಾಟದಿಂದಾಗಿ ಕಂಗೆಟ್ಟಿದ್ದ ಭಟ್ಕಳದ ರಂಜಾನ್ ಮಾರ್ಕೆಟ್ ಈ ವರ್ಷ ಭರ್ಜರಿ ವ್ಯಾಪಾರ ಕಾಣುತ್ತಿದೆ. ಆರಂಭದ ದಿನಗಳಲ್ಲಿ ಮಾರುಕಟ್ಟೆಯಲ್ಲಿ ವ್ಯಾಪಾರ ವಹಿವಾಟು ಮಂದಗತಿಯಲ್ಲಿ ಸಾಗಿತ್ತು. ಆದರೆ, ನಂತರದ ದಿನಗಳಲ್ಲಿ ಭರ್ಜರಿ ವ್ಯಾಪಾರ ಕಂಡಿದ್ದು, ವ್ಯಾಪಾರಸ್ಥರ ಮೊಗದಲ್ಲಿ ಮಂದಹಾಸ ಮೂಡಿದೆ.
ಹೌದು, ಕಳೆದ ಒಂದೂವರೆ ದಶಕದಿಂದ ಭಟ್ಕಳ ರಂಜಾನ್ ಮಾರ್ಕೆಟ್ ಹೆಚ್ಚು ಪ್ರಸಿದ್ಧಿ ಪಡೆದಿದೆ. ಬಟ್ಟೆಬರೆ, ಅಲಂಕಾರಿಕ ಸಾಮಾನುಗಳು, ಬ್ಯಾಗ್, ಚಪ್ಪಲಿಯಿಂದ ಹಿಡಿದು ಹಲವು ರೀತಿಯ ಮನೆ ಬಳಕೆಯ ವಸ್ತುಗಳು ರಂಜಾನ್ ಪೇಟೆಯಲ್ಲಿ ಸಿಗುತ್ತವೆ. ಅಲ್ಲಲ್ಲಿ ವಿಭಿನ್ನ ತಿಂಡಿ ತಿನಿಸುಗಳ ಮಾರಾಟವೂ ಜೋರಾಗಿ ನಡೆಯುತ್ತದೆ. ಇಲ್ಲಿಗೆ ಮಾರಾಟಕ್ಕೆ ಬರುವ ಸರಕುಗಳೆಲ್ಲಾ ಮಧ್ಯಮ ವರ್ಗದ ಜನರನ್ನು ಆಕರ್ಷಿಸುವುದೇ ವಿಶೇಷ. ಒಂದು ತಿಂಗಳ ರಂಜಾನ್ ಉಪವಾಸ ಮುಗಿಸಿ ಹಬ್ಬ ಆಚರಿಸುವ ಬಡ ಹಾಗೂ ಮಧ್ಯಮ ವರ್ಗದ ಜನರಿಗೆ ಖರೀದಿ ಎನ್ನುವುದು ಹೊರೆಯಾಗದಿರಲಿ ಎಂದೇ ಭಟ್ಕಳದಲ್ಲಿ ರಂಜಾನ್ ಪೇಟೆಯನ್ನು ತೆರೆಯಲಾಗಿದೆ.
ಇದನ್ನೂ ಓದಿ : ರಂಜಾನ್ ಪ್ರಾರ್ಥನೆ ವೇಳೆ ಇಮಾಮ್ ಹೆಗಲೇರಿತು ಬೆಕ್ಕು : ವಿಡಿಯೋ ನೋಡಿ
ಇನ್ನು ಈ ರಂಜಾನ್ ಮಾರ್ಕೆಟ್ ಕೇವಲ ಒಂದು ವರ್ಗದ ಜನರಿಗೆ ಮಾತ್ರ ಸೀಮಿತವಾಗಿರದೆ ವಿವಿಧೆಡೆಯಿಂದ ವ್ಯಾಪಾರಿಗಳು ಇಲ್ಲಿಗೆ ಆಗಮಿಸುತ್ತಾರೆ. ಅಲ್ಲದೇ, ಇತ್ತೀಚಿನ ವರ್ಷಗಳಲ್ಲಿ ಭಟ್ಕಳ ಸುತ್ತಮುತ್ತಲಿನ ಹಳ್ಳಿಗಳು, ಹೊನ್ನಾವರ, ಪಕ್ಕದ ಕುಂದಾಪುರ, ಶಿರೂರಿನಿಂದಲೂ ಜನರು ರಂಜಾನ್ ಪೇಟೆಯತ್ತ ಖರೀದಿಗಾಗಿ ಮುಖ ಮಾಡುತ್ತಿದ್ದಾರೆ. ಪ್ರಾರಂಭದ ದಿನಗಳಲ್ಲಿ ರಂಜಾನ್ ಮಾರ್ಕೆಟ್ ಕಳಾಹೀನವಾಗಿದ್ದರೂ, ಇತ್ತೀಚಿನ ದಿನಗಳಲ್ಲಿ ಮಾರುಕಟ್ಟೆ ಚೇತರಿಸಿಕೊಂಡು ಉತ್ತಮ ವ್ಯಾಪಾರ ಕಾಣುತ್ತಿದೆ. ವ್ಯಾಪಾರಿಗಳು ಸಹ ಉತ್ತಮ ಲಾಭದ ಯೋಜನೆ ಹಾಕಿ ಕೊಂಡಿದ್ದಾರೆ.
ಇದನ್ನೂ ಓದಿ : ಇಂಡೋನೇಷ್ಯಾದ ಮಸೀದಿಯಿಂದ ಜಗತ್ತಿಗೆ ' ಹಸಿರು ರಂಜಾನ್ ' ಸಂದೇಶ
ಅಂದಹಾಗೆ, ತಾಲೂಕಿನ ಮುಖ್ಯ ರಸ್ತೆಯ ಸೀಮಿತ ಪ್ರದೇಶದಲ್ಲಿ ಇರುವ ರಂಜಾನ್ ಪೇಟೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಕೈಗೊಳ್ಳಲಾಗಿದೆ. ಮಾರುಕಟ್ಟೆ ಹಾಗೂ ಹಳೇ ಬಸ್ ನಿಲ್ದಾಣದ ಪಕ್ಕದ ನಾಗಬನ ಪ್ರದೇಶದಲ್ಲಿ ಬ್ಯಾರಿಕೇಡ್‌ಗಳನ್ನು ಅಳವಡಿಸಿ ಓಡಾಡುವ ವಾಹನಗಳ ಮೇಲೆ ನಿರ್ಬಂಧ ವಿಧಿಸಲಾಗಿದೆ. ಜೊತೆಗೆ, ಆಯಕಟ್ಟಿನ ಸ್ಥಳಗಳಲ್ಲಿ ಸಿಸಿಟಿವಿ ಕ್ಯಾಮರಾವನ್ನು ಅಳವಡಿಸಿ, ರಂಜಾನ್ ಪೇಟೆಯಲ್ಲಿ ಓಡಾಡುವ ಜನರ ಮೇಲೆ ನಿಗಾ ಇರಿಸಲಾಗಿದೆ. ಪೊಲೀಸ್ ಅಧಿಕಾರಿಗಳು, ಸಿಬ್ಬಂದಿ ಪೇಟೆಯಲ್ಲಿ ಗಸ್ತು ತಿರುಗುತ್ತಾ ಜನರ ಚಲನವಲನಗಳನ್ನು ಗಮನಿಸುತ್ತಿರುವುದು ಕಂಡುಬಂದಿದೆ.
ಇದನ್ನೂ ಓದಿ : ಪ್ರಾರ್ಥನೆ ಬಳಿಕ ಶ್ರೀಗಳ ಆಶೀರ್ವಾದ ಪಡೆದ ಮುಸ್ಲಿಮರು .. ಸೌಹಾರ್ದತೆಗೆ ಸಾಕ್ಷಿಯಾದ ಮೂರುಸಾವಿರ ಮಠ
ರಂಜಾನ್ ಉಪವಾಸ ವೇಳೆ ಆಹಾರ ತಯಾರಿ : ಪಾಕ್ನಲ್ಲಿ ಹಿಂದುಗಳ ಮೇಲೆ ಪೊಲೀಸ್ ದೌರ್ಜನ್ಯ