ಭಟ್ಕಳ: ಸಂಚಾರಿ ನಿಯಮ ಉಲ್ಲಂಘನೆ ವಿರುದ್ಧ ಕಠಿಣ ಕ್ರಮಕೈಗೊಳ್ಳುವ ಉದ್ದೇಶದಿಂದ ಕೇಂದ್ರ ಸರ್ಕಾರ ಜಾರಿಗೆ ತಂದಿರುವ ಹೊಸ ಮೋಟಾರು ವಾಹನ ಕಾಯ್ದೆಯಲ್ಲಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಿದ್ದೇನೋ ಸರಿ. ಆದರೆ ಇದರ ಅನುಕೂಲವನ್ನು ಸರಗಳ್ಳರು ಸದುಪಯೋಗ ಪಡಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಂಡು ಬರುತ್ತಿದೆ.
ಈ ಹಿಂದೆ ಭಟ್ಕಳದಲ್ಲಿ ಹಾಡಹಗಲೇ ನಡು ರಸ್ತೆಯಲ್ಲಿ ಸರಗಳ್ಳರು ಹೆಲ್ಮೆಟ್ ಧರಿಸಿಕೊಂಡು ಸರಗಳ್ಳತನಕ್ಕೆ ಇಳಿದು ಲಕ್ಷಾಂತರ ರೂ. ಮೌಲ್ಯದ ಚಿನ್ನ ದೋಚಿದ್ದುರು. ಆ ಪ್ರಕರಣ ಇನ್ನೂ ತನಿಖೆ ಹಂತದಲ್ಲಿಯೇ ಇದೆ. ಹೆಲ್ಮೆಟ್ ಇಲ್ಲದ ದಿನದಲ್ಲಿ ನಡೆದ ಕಳ್ಳತನವನ್ನು ಪೊಲೀಸರು ಇನ್ನು ಭೇದಿಸಿಲ್ಲ. ಈಗ ಹೆಲ್ಮೆಟ್ ಕಡ್ಡಾಯವಾದ ಮೇಲೆ ಸರಗಳ್ಳತನ ನಡೆದಲ್ಲಿ ಅದರ ತನಿಖೆ ಇನ್ನೆಷ್ಟರ ಮಟ್ಟಿಗೆ ಆಗಬಹುದು ಎಂಬುದು ಸಾರ್ವಜನಿಕರ ಪ್ರಶ್ನೆಯಾಗಿದೆ.
ಈ ಹಿಂದೆ ಹೆಲ್ಮೆಟ್ ಧರಿಸುವವರ ಸಂಖ್ಯೆ ತೀರಾ ವಿರಳವಾಗಿತ್ತು. ಹಾಗಾಗಿ ಯಾರಾದರೂ ಹೆಲ್ಮೆಟ್ ಧರಿಸಿದ್ದ ಅಪರಿಚಿತ ವ್ಯಕ್ತಿ ಕಂಡರೆ ಸಾರ್ವಜನಿಕರು ಮತ್ತು ಪೊಲೀಸರು ಅಲರ್ಟ್ ಆಗುತ್ತಿದ್ದರು. ದೇಶಾದ್ಯಂತ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡುತ್ತಿದ್ದಂತೆ ಸರಗಳ್ಳರು ಮತ್ತೆ ಬಾಲ ಬಿಚ್ಚಿದ್ದು. ಕೆಲವು ದಿನಗಳ ಹಿಂದಷ್ಟೇ ಕುಮಟಾ ಪಟ್ಟಣದ ರಸ್ತೆಯಲ್ಲಿ ನಡೆದುಕೊಂಡು ಹೋಗುತ್ತಿದ್ದ ಮಹಿಳೆಯ ಮಾಂಗಲ್ಯ ಸರವನ್ನು ಹೆಲ್ಮೆಟ್ ದಾರಿಗಳು ಎಗರಿಸಿ ಪರಾರಿಯಾಗಿದ್ದರು.
ಮತ್ತೆ ಸರಗಳ್ಳತನಕ್ಕೆ ಹೆಲ್ಮೆಟ್ ಕಡ್ಡಾಯ ದಾರಿಯಾಗಲಿದೆಯಾ?
ತಾಲೂಕಿನಲ್ಲಿ ಈ ಹಿಂದೆ ಹಲವು ಸರಗಳ್ಳತನದ ಪ್ರಕರರಣ ನಡೆದಿದ್ದು, ಭಟ್ಕಳದ ಅರ್ಬನ್ ಬ್ಯಾಂಕ್ ಸಮೀಪ ಮಹಿಳೆಯೊಬ್ಬರು ನಡೆದುಕೊಂಡು ಹೋಗುತ್ತಿರುವಾಗ ವಿಳಾಸ ಕೇಳುವ ನೆಪದಲ್ಲಿ 90 ಸಾವಿರಕ್ಕೂ ಅಧಿಕ ಮೌಲ್ಯದ ಚಿನ್ನದ ಸರವನ್ನು ಎಗರಿಸಿ ಪರಾರಿಯಾಗಿದ್ದರು. ನಂತರ ಈ ಪ್ರಕರಣ ನಡೆದ ಒಂದು ವರ್ಷದಲ್ಲೇ ಚನ್ನಪಟ್ಟಣದ ಹನುಮಂತ ದೇವಸ್ಥಾನದ ಸಮೀಪದಲ್ಲಿ ಬೈಕ್ ನಲ್ಲಿ ಹೆಲ್ಮೆಟ್ ಧರಿಸಿ ಬಂದ ವ್ಯಕ್ತಿಗಳು ಮಹಿಳೆಯ ಮಾಂಗಲ್ಯ ಸರವನ್ನು ಕದ್ದು ಪರಾರಿಯಾಗಿದ್ದರು. ತಾಲೂಕಿನಲ್ಲಿ ನಡೆದ ಸರಗಳ್ಳತನದ ಪ್ರಕರಣ ಕೆಲವದರಲ್ಲಿ ಆರೋಪಿಗಳು ಪತ್ತೆಯಾಗಿದ್ದು, ಮುಖ್ಯ ಪ್ರಕರಣದ ಆರೋಪಿ ಪತ್ತೆ ಹಚ್ಚುವಲ್ಲಿ ಪೊಲೀಸ್ ಇಲಾಖೆ ವಿಫಲವಾಗಿದೆ.
ಭಟ್ಕಳದಲ್ಲಿ ಹೆಚ್ಚಾಗಬೇಕಿದೆ ಸಿ.ಸಿ.ಟಿ.ವಿ ಅಳವಡಿಕೆ:
ಹೆಲ್ಮೆಟ್ ಧರಿಸುವುದು ಕಡ್ಡಾಯವಾಗುತ್ತಿದಂತೆ ಪಟ್ಟಣ ಜನರು ಸೇರಿದಂತೆ ಗ್ರಾಮೀಣ ಹಾಗೂ ಹಳ್ಳಿಯ ಜನರೆಲ್ಲ ದಂಡದಿಂದ ತಪ್ಪಿಸಿಕೊಳ್ಳಲು ಹೆಲ್ಮೆಟ್ ಧರಿಸುತ್ತಿದ್ದಾರೆ. ಈ ಸಮಯದಲ್ಲಿ ಸರಗಳ್ಳತನವಾದರೆ ಕಳ್ಳತನ ಮಾಡಿದವರು ಹಾಗೂ ಸಾರ್ವಜನಿಕರು ಯಾರು ಎಂದು ತಿಳಿಯುವುದು ಪೊಲೀಸರಿಗೆ ಕಷ್ಟವಾಗುವುದರಿಂದ ಪಟ್ಟಣದ ಹಲವು ಕಡೆ ಸಿ.ಸಿ.ಟಿ.ವಿಯನ್ನು ಹೆಚ್ಚಾಗಿ ಅಳವಡಿಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.