ಕಾರವಾರ: ಮರಾಠ ಅಭಿವೃದ್ಧಿ ನಿಗಮ ರಚನೆ ವಿರೋಧಿಸಿ ಕನ್ನಡ ಪರ ಸಂಘಟನೆಗಳು ನಾಳೆ ಕರ್ನಾಟಕ ಬಂದ್ಗೆ ಕರೆ ನೀಡಿವೆ. ಆದ್ರೆ ಬಂದ್ ಮಾಡಿ ಜನಜೀವನ ಅಸ್ತವ್ಯಸ್ತ ಮಾಡುವುದು ಸರಿಯಲ್ಲ. ಯಾರಾದರು ಒತ್ತಾಯದಿಂದ ಬಂದ್ ಮಾಡಿಸಿದ್ರೆ ಅವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳುವುದಾಗಿ ಸಚಿವ ಬಸವರಾಜ್ ಬೊಮ್ಮಾಯಿ ಖಡಕ್ ಎಚ್ಚರಿಕೆ ರವಾನಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಒತ್ತಾಯಪೂರ್ವಕ ಬಂದ್ ಮಾಡುವವರ ಬಗ್ಗೆ ಕ್ರಮ ಕೈಗೊಳ್ಳಲು ಸುಪ್ರೀಂ ಕೋರ್ಟ್ ಆದೇಶ ಇದೆ. ಬಂದ್ ಮಾಡಿ ಜನಜೀವನ ಅಸ್ತವ್ಯಸ್ತ ಮಾಡುವುದು ಸರಿಯಲ್ಲ. ಇದರಿಂದ ವ್ಯಾಪಾರ-ವಹಿವಾಟು, ಅನಾರೋಗ್ಯ ಪೀಡಿತರಿಗೆ ಸಾಕಷ್ಟು ಸಮಸ್ಯೆಯಾಗಲಿದೆ. ಈಗಲೂ ಕೂಡ ಬಂದ್ ವಾಪಸ್ ಪಡೆಯಲು ಮನವಿ ಮಾಡುತ್ತೇನೆ ಎಂದರು.
ಪ್ರತಿಭಟನೆ ಮಾಡಲು ಹಲವು ರೀತಿಯಲ್ಲಿ ಅವಕಾಶಗಳಿವೆ. ಬಂದ್ ವೇಳೆ ಸರ್ಕಾರಿ ಕಚೇರಿ, ಬಸ್ ಓಡಾಟ, ಎಂದಿನಂತೆ ಇರುತ್ತದೆ. ಹಾಗಾಗಿ ಒತ್ತಾಯದಿಂದ ಬಂದ್ ಮಾಡಿಸಿದರೆ ಅಂತಹವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದರು.
ಈ ಸುದ್ದಿಯನ್ನೂ ಓದಿ: ಬುರೆವಿ ಚಂಡಮಾರುತ ಎಫೆಕ್ಟ್.. ದಕ್ಷಿಣ ಒಳನಾಡಿನಲ್ಲಿ ಯೆಲ್ಲೋ ಅಲರ್ಟ್ ಘೋಷಣೆ
ಹೊಸ ವರ್ಷಾಚರಣೆ ಸಲುವಾಗಿ ಈಗಾಗಲೇ ಹಲವು ಸಲಹೆ ಸೂಚನೆಗಳು ಬಂದಿವೆ. ಮುಖ್ಯಂಮಂತ್ರಿಗಳು ಎರಡು ದಿನದಲ್ಲಿ ಸಭೆ ಕರೆದು ಸೂಕ್ತ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ತಿಳಿಸಿದರು. ವಿಧಾನ ಪರಿಷತ್ ಸದಸ್ಯ ಹೆಚ್ ವಿಶ್ವನಾಥ್ ಅಸಮಧಾನ ಹೊರ ಹಾಕುತ್ತಿರುವ ಬಗ್ಗೆ ಕೇಳಿದಾಗ, ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ ಎಂದು ಹೇಳಿದರು.