ಕಾರವಾರ: ದೇಶದಲ್ಲಿ 10 ಕೋಟಿಗಿಂತ ಅಧಿಕ ಜನಸಂಖ್ಯೆ ಇರುವ ಬಂಜಾರ ಸಮುದಾಯ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ. ಎಲ್ಲಿಯೇ ಇದ್ದರೂ ಕೂಡ ಈ ಸಮುದಾಯದವರ ಕಲೆ, ಸಂಸ್ಕೃತಿ, ಆಚರಣೆ, ಮದುವೆ ಸಂಪ್ರದಾಯಗಳು ಒಂದೇ ಆಗಿದೆ. ಆದರೆ, ವಿಚಿತ್ರವೆಂದರೆ ಈ ಸಮುದಾಯಕ್ಕೆ ಒಂದೊಂದು ರಾಜ್ಯದಲ್ಲೂ ಒಂದೊಂದು ರೀತಿಯ ಮೀಸಲಾತಿ ನೀಡಲಾಗಿದೆ. ಇದರಿಂದಾಗಿ ಉದ್ಯೋಗ, ಮದುವೆ ಸೇರಿದಂತೆ ಇನ್ನಿತರ ಸರ್ಕಾರಿ ಯೋಜನೆಗಳ ಸೌಲಭ್ಯಗಳಿಂದ ಸಮುದಾಯದ ಜನತೆ ವಂಚಿತರಾಗುವಂತಾಗಿದೆ.
ಆಡುಭಾಷೆಯಲ್ಲಿ ಲಮಾಣಿ, ಲಂಬಾಣಿಗಳೆಂದು ಕರೆಯುವ ಈ ಬಂಜಾರರು ದೇಶದ ಮಹಾರಾಷ್ಟ್ರ, ಕರ್ನಾಟಕ, ಆಂಧ್ರಪ್ರದೇಶ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ನೆಲೆಸಿದ್ದಾರೆ. ತಮ್ಮ ಉಡುಗೆ-ತೊಡುಗೆ, ಸಂಸ್ಕೃತಿ, ಸಂಪ್ರದಾಯ, ಭಾಷೆಯಿಂದಲೇ ಇವರನ್ನ ಬಂಜಾರರು ಅಥವಾ ಲಮಾಣಿಗಳೆಂದು ಗುರುತಿಸಬಹುದಾಗಿದೆ.
ಶೈಕ್ಷಣಿಕ, ಸಾಮಾಜಿಕ, ರಾಜಕೀಯವಾಗಿಯೂ ಹಿಂದುಳಿದ ಈ ಸಮುದಾಯಕ್ಕೆ ಮಹಾರಾಷ್ಟ್ರದಲ್ಲಿ ಇತರೆ ಹಿಂದುಳಿದ ವರ್ಗಗಳ ಮೀಸಲಾತಿ ನೀಡಲಾಗಿದೆ. ಆದರೆ, ಆಂಧ್ರಪ್ರದೇಶದಲ್ಲಿ ಪರಿಶಿಷ್ಟ ಪಂಗಡ, ಅಂದ್ರೆ ಎಸ್.ಟಿ ಮಾನ್ಯತೆ ನೀಡಲಾಗಿದ್ದು, ಕರ್ನಾಟಕದಲ್ಲಿ ಪರಿಶಿಷ್ಟ ಜಾತಿ(SC) ಮೀಸಲಾತಿ ನೀಡಲಾಗಿದೆ.
ಇದರಿಂದಾಗಿ ಬಂಜಾರ ಸಮುದಾಯದ ಜನರು ಸಾಕಷ್ಟು ಸರ್ಕಾರಿ ಸೌಲಭ್ಯಗಳಿಂದ ವಂಚಿತರಾಗುವಂತಾಗಿದೆ. ಅದರಲ್ಲೂ ಮದುವೆ ಹಾಗೂ ಸರ್ಕಾರಿ ಉದ್ಯೋಗದಲ್ಲಿ ಈ ಮೀಸಲಾತಿ ಬಹುದೊಡ್ಡ ಸಮಸ್ಯೆಯಾಗಿ ಪರಿಣಮಿಸಿದೆ. ಹೀಗಾಗಿ, ಈ ಸಮುದಾಯದವರು ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಉದ್ಯೋಗಕ್ಕೆ ತೆರಳಬೇಕೆಂದರೆ ಇಲ್ಲಿನ ಮೀಸಲಾತಿ ಅಲ್ಲಿನ ರಾಜ್ಯದಲ್ಲಿ ಬದಲಾವಣೆಯಾಗುತ್ತದೆ.
ಮೀಸಲಾತಿ ಬದಲಾವಣೆ.. ಅಲ್ಲದೇ, ಹೊರರಾಜ್ಯದವರನ್ನ ಮದುವೆಯಾದಲ್ಲಿ ಅಥವಾ ಮದುವೆಯಾಗಿ ಹೊರರಾಜ್ಯಕ್ಕೆ ತೆರಳಿದಲ್ಲಿ ಒಂದು ರಾಜ್ಯದಿಂದ ಇನ್ನೊಂದು ರಾಜ್ಯಕ್ಕೆ ಮೀಸಲಾತಿ ಬದಲಾಗುವುದರಿಂದ ಉದ್ಯೋಗ ಸೇರಿದಂತೆ ಜೀವನ ನಡೆಸುವುದಕ್ಕೂ ತೊಂದರೆ ಅನುಭವಿಸುವಂತಾಗಿದೆ ಅನ್ನೋದು ಸಮುದಾಯದವರ ಅಳಲು.
ಈ ವಿಚಿತ್ರ ಮೀಸಲಾತಿ ಸಮಸ್ಯೆ ಕುರಿತು ಹಲವು ಬಾರಿ ಸರ್ಕಾರಗಳ ಗಮನ ಸೆಳೆದರೂ ಈವರೆಗೆ ಯಾವುದೇ ಪ್ರಯೋಜನವಾಗಿಲ್ಲ. ರಾಜ್ಯದಲ್ಲಿ 5,788 ತಾಂಡಾಗಳಿದ್ದು, ಅದರಲ್ಲಿ 1,345 ತಾಂಡಾಗಳು ಕಂದಾಯ ಗ್ರಾಮಗಳಾಗಿ ದಶಕಗಳ ಹಿಂದೆ ಸರ್ಕಾರ ಆದೇಶಿಸಿದ್ದು, ಇವುಗಳಲ್ಲಿ ಯಾವುದೇ ತಾಂಡಾಕ್ಕೆ ಆದೇಶವನ್ನ ಅನುಷ್ಠಾನಗೊಳಿಸಿಲ್ಲ.
ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯ..ಹೀಗಾಗಿ, ದೇಶದ ಲಂಬಾಣಿಗರೆಲ್ಲರನ್ನ ಪರಿಶಿಷ್ಟ ಜಾತಿಯಲ್ಲಿ ಸೇರಿಸಿ ಲಂಬಾಣಿ ಏಕತೆಯನ್ನು ಕಾಪಾಡಿ, ದೇಶದ ಎಲ್ಲಾ ಲಂಬಾಣಿಗರನ್ನು ಪರಿಶಿಷ್ಟ ಜಾತಿ ಪಟ್ಟಿಗೆ ಸೇರಿಸಬೇಕೆಂಬ ಒತ್ತಾಯ ಇದೀಗ ಮತ್ತೆ ಕೇಳಿಬಂದಿದೆ. ಅಲ್ಲದೆ, ದೇಶದ ಮೂಲೆ-ಮೂಲೆಗಳಲ್ಲಿ ಎಲ್ಲಾ ರಾಜ್ಯಗಳಲ್ಲಿ ಲಂಬಾಣಿಗರು ಮಾತನಾಡುವ ಭಾಷೆ ಒಂದೇ ಆಗಿದೆ.
ಬಂಜಾರಾ ಸಮುದಾಯ ಎಚ್ಚರಿಕೆ.. ಹೀಗಾಗಿ, ದೇಶಾದ್ಯಂತ ವಾಸವಾಗಿರುವ ಲಂಬಾಣಿಗರ ಭಾಷೆಗೆ ಕೇಂದ್ರ ಸರ್ಕಾರ 8ನೇ ಶೆಡ್ಯೂಲ್‌ನಲ್ಲಿ ಸೇರಿಸಿ ಮಾನ್ಯತೆಗೆ ಆದೇಶಿಸಬೇಕು ಎಂದು ಕೂಡ ಆಗ್ರಹಿಸಲಾಗಿದೆ. ಒಂದು ವೇಳೆ ಬೇಡಿಕೆಗಳನ್ನ ಈಡೇರಿಸದೇ ನಿರ್ಲಕ್ಷ್ಯ ಮುಂದುವರಿದರೆ ಸರ್ಕಾರದ ವಿರುದ್ಧ ಉಗ್ರರೂಪದಲ್ಲಿ ಪ್ರತಿಭಟನೆ ಸಹ ನಡೆಸುವುದಾಗಿ ಬಂಜಾರ ಸಮುದಾಯದ ಮುಖಂಡರು ಎಚ್ಚರಿಕೆ ರವಾನಿಸಿದ್ದಾರೆ.
ಒಟ್ಟಾರೆ, ಒಂದೇ ಸಮುದಾಯವಾಗಿದ್ದರೂ ಒಂದೊಂದು ರಾಜ್ಯದಲ್ಲಿ ಒಂದೊಂದು ರೀತಿಯ ಮೀಸಲಾತಿಯಿಂದಾಗಿ ಬಂಜಾರ ಸಮುದಾಯದವರು ಸಂಕಷ್ಟ ಅನುಭವಿಸುವಂತಾಗಿದೆ. ಇನ್ನಾದ್ರೂ ಸರ್ಕಾರಗಳು ಎಚ್ಚೆತ್ತುಕೊಂಡು ನಿರ್ಲಕ್ಷಿತ ಬಂಜಾರ ಸಮುದಾಯದ ಬೇಡಿಕೆಗಳನ್ನ ಈಡೇರಿಸಲು ಮುಂದಾಗಬೇಕಿದೆ. ಆ ಮೂಲಕ ಹಿಂದುಳಿದಿರುವ ಈ ಜನಾಂಗವನ್ನು ಮುನ್ನೆಲೆಗೆ ತರುವ ಪ್ರಯತ್ನವಾಗಬೇಕಿದೆ.