ಕಾರವಾರ: ಉತ್ತರಕನ್ನಡ ಜಿಲ್ಲಾ ಪೊಲೀಸರ ವಾರ್ಷಿಕ ಕ್ರೀಡಾಕೂಟ ಕಾರ್ಯಕ್ರಮ ಭಾನುವಾರ ಜಿಲ್ಲಾ ಕೇಂದ್ರ ಕಾರವಾರದಲ್ಲಿ ನಡೆಯಿತು. ಕಾರ್ಯಕ್ರಮವನ್ನು ಆರ್ಮಿ ಕ್ರೀಡಾ ತರಬೇತುದಾರ ಕಾಶೀನಾಥ ನಾಯ್ಕ ಅವರು ಉದ್ಘಾಟಿಸಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಸುಮನಾ ಡಿ. ಪೆನ್ನೇಕರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಕ್ರೀಡಾ ಜ್ಯೋತಿಯನ್ನ ಹಸ್ತಾಂತರಿಸುವ ಮೂಲಕ ವಿದ್ಯುಕ್ತ ಚಾಲನೆ ನೀಡಿದ್ದು, ಬಳಿಕ ಕಾಶೀನಾಥ ನಾಯ್ಕ ಜಾವಲಿನ್ ಎಸೆಯುವ ಮೂಲಕ ಕ್ರೀಡಾಕೂಟವನ್ನ ವಿನೂತನವಾಗಿ ಉದ್ಘಾಟಿಸಿದರು.
ನಂತರ ಕ್ರೀಡಾಪಟುಗಳನ್ನ ಉದ್ದೇಶಿಸಿ ಮಾತನಾಡಿದ ಅವರು, ಯಾವುದೇ ಕ್ಷೇತ್ರದಲ್ಲಾದರೂ ನಾವು ನಮ್ಮ ಸಂಪೂರ್ಣ ಪರಿಶ್ರಮವನ್ನ ಹಾಕುವುದು ಅತ್ಯಗತ್ಯವಾಗಿದೆ. ನಾವು ಎಷ್ಟು ಉತ್ಸಾಹದಿಂದ ಪಾಲ್ಗೊಳ್ಳುತ್ತೇವೆಯೋ ಅಷ್ಟು ಸಾಧನೆ ಮಾಡಲು ಸಹಕಾರಿಯಾಗುತ್ತದೆ ಸ್ಫೂರ್ತಿಯ ಮಾತುಗಳನ್ನಾಡಿದರು.
ಬಳಿಕ ಕ್ರೀಡಾಪಟುಗಳಿಗೆ ಕ್ರೀಡೆಯಲ್ಲಿ ಸ್ಪರ್ಧಿಸುವ ಕುರಿತು ಕೆಲವೊಂದು ಸಲಹೆಗಳನ್ನ ಸಹ ನೀಡಿದರು. ಕ್ರೀಡಾಕೂಟದಲ್ಲಿ 800 ಮೀಟರ್, 400 ಮೀಟರ್ ಓಟ, ಜಾವಲಿನ್ ಥ್ರೋ ಸೇರಿದಂತೆ ವೈಯಕ್ತಿಕ ಸ್ಪರ್ಧೆಗಳು ಜರುಗಿದ್ದು, ಮೂರು ದಿನಗಳ ಕಾಲ ವಿವಿಧ ಕ್ರೀಡಾ ಸ್ಪರ್ಧೆಗಳು ಜರುಗಲಿವೆ.
ಇದೇ ವೇಳೆ ಕಾರ್ಯಕ್ರಮದಲ್ಲಿ ಕ್ರೀಡಾ ತರಬೇತುದಾರ ಕಾಶೀನಾಥ ನಾಯ್ಕರನ್ನ ಜಿಲ್ಲಾ ಪೊಲೀಸ್ ಇಲಾಖೆಯಿಂದ ಸನ್ಮಾನಿಸಿ ಗೌರವಿಸಲಾಯಿತು. ಕಾಶಿನಾಥ್ ನಾಯ್ಕ ಅವರು ಟೋಕಿಯೋ ಒಲಿಂಪಿಕ್ಸ್ನಲ್ಲಿ ಐತಿಹಾಸಿಕ ಚಿನ್ನದ ಪದಕ ಗೆದ್ದಿದ್ದ ನೀರಜ್ ಚೋಪ್ರಾ ಅವರಿಗೂ ಕೆಲವು ಸಮಯ ಕೋಚ್ ಆಗಿ ತರಬೇತಿ ನೀಡಿದ್ದರು. ಇವರ ಸೇವೆಗೆ ಕರ್ನಾಟಕ ಕ್ರೀಡಾ ಸಚಿವಾಲಯ 10 ಲಕ್ಷ ರೂ. ಬಹುಮಾನ ನೀಡಿ ಗೌರವಿಸಿತ್ತು.
ಇದನ್ನೂ ಓದಿ:ಋತುರಾಜ್ ಭಾರತಕ್ಕಾಗಿ ಅದ್ಭುತಗಳನ್ನು ಸೃಷ್ಟಿಸಲಿದ್ದಾರೆ: ಆಯ್ಕೆ ಸಮಿತಿ ಅಧ್ಯಕ್ಷರ ವಿಶ್ವಾಸ