ಶಿರಸಿ(ಉತ್ತರ ಕನ್ನಡ) : ಕೊಳೆ ರೋಗ, ಅಡಿಕೆ ಮಿಳ್ಳೆ ಉದುರುವುದು, ಮಂಗನ ಕಾಟ ಹೀಗೆ ಹತ್ತು ಹಲವು ಸಮಸ್ಯೆಗಳಿಂದ ಕಂಗೆಟ್ಟಿದ್ದ ಅಡಿಕೆ ಬೆಳೆಗಾರರಿಗೆ ಈಗ ಬಂಪರ್ ಲಾಟರಿ ಹೊಡೆದಿದೆ. ಉತ್ತರ ಕನ್ನಡ ಜಿಲ್ಲೆಯ ಘಟ್ಟದ ಮೇಲಿನ ತಾಲೂಕುಗಳ ವಾಣಿಜ್ಯ ಬೆಳೆಯಾದ ಅಡಿಕೆ ದರ ಕಳೆದೆರಡು ವಾರಗಳಿಂದ ಭಾರಿ ಏರಿಕೆ ಕಂಡಿರುವುದು ಬೆಳೆಗಾರರಿಗಿಂತ ವ್ಯಾಪಾರಸ್ಥರ ಮೊಗದಲ್ಲಿ ಹೆಚ್ಚು ಸಂತಸ ಮೂಡಿಸಿದೆ.
ಎಂದಿನಂತೆ ಶ್ರಾವಣ ಮಾಸದಲ್ಲಿ ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ದರ ಸಕತ್ ತೇಜಿಯಾಗಿದೆ. ಹದಿನೈದು ದಿನಗಳ ಹಿಂದೆ 38-39 ಸಾವಿರ ರೂಪಾಯಿ ದರವಿದ್ದ ಚಾಲಿಗೆ ಪ್ರಸ್ತುತ 43-45 ಸಾವಿರ ದರ ಕಾಣುತ್ತಿದೆ. ಒಂದು ವಾರದೊಳಗೆ ನಾಲ್ಕರಿಂದ ಐದು ಸಾವಿರ ರೂಪಾಯಿ ಏರಿಕೆಯಾಗಿದೆ. ಇನ್ನೊಂದೆಡೆ ಕೆಂಪಡಿಕೆ ದರ ಸಹ 48-49 ಸಾವಿರವಿರುವುದು ಈಗ 50-51 ಸಾವಿರಕ್ಕೆ ತಲುಪಿದೆ. ಇತ್ತೀಚೆಗೆ ಅಡಿಕೆ ಬೆಳೆಯುವವರ ಸಂಖ್ಯೆಯು ಹೆಚ್ಚಾಗಿದೆ. ದರ ಯಾವಾಗ ಬೇಕಾದರೂ ವ್ಯತ್ಯಾಸ ಕಾಣಬಹುದಾಗಿದೆ. ಹೀಗಾಗಿ ರೈತರು ಖರ್ಚು ವೆಚ್ಚ ನಿಭಾಯಿಸಿಕೊಂಡು ಹೋಗಬೇಕು ಎನ್ನುವುದು ಸಹಕಾರಿ ಸಂಘಗಳ ಅಭಿಪ್ರಾಯವಾಗಿದೆ.
ಇದನ್ನೂ ಓದಿ: ಎರಡು ತಾಲೂಕುಗಳಿಗೆ ಮಲತಾಯಿ ಧೋರಣೆ : ಅಡಕೆ ಬೆಳೆಗೆ ಸಬ್ಸಿಡಿ ನೀಡುವಂತೆ ರೈತರ ಒತ್ತಾಯ
ಉತ್ತರ ಕನ್ನಡದ ಸಿದ್ದಾಪುರ, ಶಿರಸಿ ಹಾಗೂ ಯಲ್ಲಾಪುರ ತಾಲೂಕಿನ ಪ್ರಮುಖ ಅಡಿಕೆ ವಹಿವಾಟು ಸಂಸ್ಥೆಗಳಾದ ತೋಟಗಾರ್ ಸೇಲ್ ಸೊಸೈಟಿ ಹಾಗೂ ಟಿಎಂಎಸ್ ಅಂಗಣದಲ್ಲಿ ಸಾವಿರಾರು ಕ್ವಿಂಟಾಲ್ ಅಡಿಕೆ ವ್ಯಾಪಾರವಾಗುತ್ತಿದೆ. ವರ್ಷದಿಂದ ವರ್ಷಕ್ಕೆ ಅಡಿಕೆಯ ಉತ್ಪನ್ನದಲ್ಲಿ ಹೇರಳವಾಗಿ ಹೆಚ್ಚಳ ಕಂಡು ಬಂದರೂ ಸಹ ಸದ್ಯ ದರ ಸ್ಥಿರವಾಗಿರುವುದು ಬೆಳೆಗಾರರೂ ನಿಶ್ಚಿಂತರಾಗಿರುವಂತೆ ಮಾಡಿದೆ.
ಒಟ್ಟಾರೆ, ಪ್ರತಿ ವರ್ಷ ಶ್ರಾವಣ ಮಾಸದಲ್ಲಿ ಅಡಕೆ ದರ ಏರಿಕೆ ಕಾಣುವುದು ವಾಡಿಕೆ. ಇಲ್ಲಿ ರೈತರ ಜೊತೆಗೆ ವ್ಯಾಪಾರಸ್ಥರಿಗೂ ಒಳ್ಳೆಯ ಲಾಭ ಸಿಗುತ್ತಿದೆ. ಕಾರಣ ಅಡಿಕೆ ಕೃಷಿಯತ್ತ ಮತ್ತಷ್ಟು ಜನ ಮುಖ ಮಾಡುವ ಸಾಧ್ಯತೆಯೂ ಇದ್ದು, ಬೆಲೆ ಸ್ಥಿರತೆಗಾಗಿ ಸಹಕಾರಿ ಸಂಘಗಳು ಹೋರಾಡಬೇಕಿದೆ.
ಇದನ್ನೂ ಓದಿ: ಹುಬ್ಬಳ್ಳಿ: ಹೆಸರು ಬೆಳೆಗಿಲ್ಲ ಸೂಕ್ತ ಪರಿಹಾರ; ಸಂಕಷ್ಟದಲ್ಲಿ ಸಿಲುಕಿದ ರೈತ