ಭಟ್ಕಳ: ನಗರದ ನಸ್ತಾರ ಭಾಗದ ಡೆಡ್ ಎಂಡ್ ರಸ್ತೆಗೆ 15 ವರ್ಷ ಹಿಂದೆ ಡಾಂಬರು ಹಾಕಿದ್ದು, ಅದಾದ ಬಳಿಕ ಈ ರಸ್ತೆಗೆ ಯಾವುದೇ ದುರಸ್ಥಿ ಕಾರ್ಯ ನಡೆದಿಲ್ಲವೆಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಒಂದೆರೆಡು ವರ್ಷದ ಹಿಂದೆ ಸಮರ್ಪಕ ರಸ್ತೆ ನಿರ್ಮಾಣ ಆಗುತ್ತಿರುವ ವೇಳೆ ಇನ್ನೂ 1.5 ಕಿ.ಮೀ ನಷ್ಟು ರಸ್ತೆ ಬಾಕಿ ಬಿಟ್ಟಿರುವ ಬಗ್ಗೆ ರಸ್ತೆ ಕಾಮಗಾರಿ ಗುತ್ತಿಗೆದಾರರಲ್ಲಿ ಪ್ರಶ್ನಿಸಿದ ಸ್ಥಳೀಯರಿಗೆ ನಮಗೆ ಟೆಂಡರ ಸಿಕ್ಕಿರುವುದು ಇಷ್ಟೇ.. ಉಳಿದಿರುವ ರಸ್ತೆ ಬಗ್ಗೆ ತಿಳಿದಿಲ್ಲ ಅಂತಾ ರಸ್ತೆ ನಿರ್ಮಾಣದ ಗುತ್ತಿಗೆದಾರರು ಉತ್ತರಿಸಿದ್ದಾರೆ ಎಂದು ಮಾಧ್ಯಮದ ಮುಂದೆ ಸ್ಥಳೀಯರು ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.
ಸಮುದ್ರದ ಬದಿಯ ಈ ಹೊಂಡಮಯವಾದ ರಸ್ತೆ ಮಳೆಗಾಲದಲ್ಲಿ ನೀರಿನಿಂದ ತುಂಬಿರುತ್ತೆ. ಆದಷ್ಟು ಬೇಗ ಹಾಳಾದ ರಸ್ತೆ ಸರಿಪಡಿಸದಿದ್ದಲ್ಲಿ ಮುಂದಿನ ಮಳೆಗಾಲದಲ್ಲಿ ಇಲ್ಲಿ ರಸ್ತೆ ಇರುವ ಕುರುಹು ಸಹ ಇಲ್ಲದಂತಾಗಲಿದೆ ಎಂಬುದು ಸ್ಥಳೀಯರ ಅಭಿಪ್ರಾಯ. ಕೇವಲ 1.5 ಕಿ.ಮೀ. ರಸ್ತೆ ಡಾಂಬರೀಕರಣಕ್ಕೆ ಮನಸ್ಸು ಮಾಡದ ಜನಪ್ರತಿನಿಧಿಗಳು, ಸಂಬಂಧಪಟ್ಟ ಇಲಾಖೆಯ ವಿರುದ್ಧ ಇಲ್ಲಿನ ಸ್ಥಳೀಯರು ಹಿಡಿಶಾಪ ಹಾಕುತ್ತಿದ್ದಾರೆ.