ಶಿರಸಿ : ಉತ್ತರಕನ್ನಡ ಜಿಲ್ಲೆಯ ಶಿರಸಿ, ಸಿದ್ದಾಪುರ ತಾಲೂಕಿನ ಗ್ರಾಮೀಣ ಭಾಗದಲ್ಲಿ ಜಾನುವಾರುಗಳು ನಿಗೂಢ ರೋಗಕ್ಕೆ ಬಲಿಯಾಗುತ್ತಿರುವುದು ಜನರಲ್ಲಿ ಆತಂಕ ಮೂಡಿಸಿದೆ.
ಜಿಲ್ಲೆಯಲ್ಲಿ ಕೊರೊನಾ ಎರಡನೇ ಅಲೆ ತೀವ್ರ ಸ್ವರೂಪ ಪಡೆದಿರುವುದು ಎಲ್ಲರಿಗೂ ತಿಳಿದ ಸಂಗತಿ. ಇದೀಗ ಗ್ರಾಮೀಣ ಭಾಗದಲ್ಲಿ ಜಾನುವಾರುಗಳಲ್ಲಿ ವಿಚಿತ್ರ ರೋಗವೊಂದು ಕಾಣಿಸಿದೆ.
ಶಿರಸಿ ಹಾಗೂ ಸಿದ್ದಾಪುರ ತಾಲೂಕಿನ ತಟ್ಟಿಕೈ, ಹೇರೂರು, ಕೆರೆಗದ್ದೆ ಭಾಗದ ಜಾನುವಾರುಗಳು ಈ ವಿಚಿತ್ರ ರೋಗಕ್ಕೆ ಬಲಿಯಾಗುತ್ತಿವೆ. ಹೇರೂರು ಭಾಗವೊಂದರಲ್ಲೇ 10ಕ್ಕೂ ಹೆಚ್ಚು ಜಾನುವಾರುಗಳು ಸಾವನ್ನಪ್ಪಿವೆ.
ವಿಶೇಷವಾಗಿ ಗರ್ಭ ಧರಿಸಿದ ಜಾನುವಾರುಗಳೇ ಈ ರೋಗಕ್ಕೆ ತುತ್ತಾಗುತ್ತಿದ್ದು, ಆರೋಗ್ಯವಾಗಿದ್ದ ಜನುವಾರು ಇದ್ದಕ್ಕಿದ್ದಂತೆ ಕುಸಿದುಬೀಳುತ್ತದೆ. ಅಲ್ಪ ಸ್ವಲ್ಪ ಮೇವು ತಿನ್ನುವ ಜಾನುವಾರು ಮೇಲೇಳಲು ಆಗದಷ್ಟು ಬಳಲಿಕೆಯಿಂದ ಅಲ್ಲೇ ನರಳಿ ನರಳಿ ಸಾವನ್ನಪ್ಪುತ್ತಿವೆ.
ಕೆಲ ಜಾನುವಾರುಗಳಲ್ಲಿ ಜ್ವರವೂ ಕಾಣಿಸಿದೆ. ಈ ರೋಗಕ್ಕೆ ಸ್ಥಳೀಯ ಪಶು ವೈದ್ಯರು ಚಿಕಿತ್ಸೆ ನೀಡಿದರೂ ಪರಿಣಾಮ ಕಂಡು ಬಂದಿಲ್ಲ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಓದಿ: ರಾಜ್ಯದಲ್ಲಿ ಆಕ್ಸಿಜನ್, ರೆಮ್ಡಿಸಿವರ್ ಕೊರತೆಯಿಲ್ಲ; ಸಚಿವ ಸುಧಾಕರ್