ಉಡುಪಿ: ನೇಜಾರು ಕೊಲೆ ಪ್ರಕರಣದ ಆರೋಪಿಯನ್ನು ಮಹಜರು ಮಾಡಲು ನೇಜಾರು ಕೊಲೆ ನಡೆದ ಸ್ಥಳಕ್ಕೆ ಕರೆ ತರಲಾಗಿತ್ತು. ಮಹಜರು ಬಳಿಕ ಆರೋಪಿ ಹಿಂದಕ್ಕೆ ಕರೆದುಕೊಂಡು ಹೋಗುವ ಸಂದರ್ಭದಲ್ಲಿ ಉದ್ರಿಕ್ತ ಗುಂಪು ಪೊಲೀಸ್ ವಾಹನದತ್ತ ನುಗ್ಗಿ ಆರೋಪಿಗೆ ಹಲ್ಲೆ ನಡೆಸಲು ಯತ್ನಿಸಿದ್ದಾರೆ. ತಕ್ಷಣ ಕಾರ್ಯ ಪ್ರವೃತ್ತರಾದ ಪೊಲೀಸರು ಲಘು ಲಾಠಿ ಚಾರ್ಜ್ ನಡೆಸಿ ಆಕ್ರೋಶಿತ ಗುಂಪನ್ನು ಚದುರಿಸಿದ ಘಟನೆ ನಡೆದಿದೆ.
ಈ ಸಂದರ್ಭದಲ್ಲಿ ಸಾರ್ವಜನಿಕರು ಆರೋಪಿಯನ್ನು ಗಲ್ಲಿಗೇರಿಸಿ ಎಂದು ರಸ್ತೆ ತಡೆದು ಪ್ರತಿಭಟನೆ ನಡೆಸಿದರು. ಡಿವೈಎಸ್ಪಿ ದಿನಕರ ನೇತೃತ್ವದಲ್ಲಿ ಮಹಜರಿಗೆ ಆಗಮಿಸಿದ್ದರು. ಈ ಸಂದರ್ಭದಲ್ಲಿ ಬೆಳಗಿನಿಂದ ಕಾಯುತ್ತಿದ್ದ ಆಕ್ರೋಶಿತ ಗುಂಪು ಆರೋಪಿಯ ಮೇಲೆ ದಾಳಿಗೆ ಯತ್ನ ನಡೆಸಿದಾಗ ಲಘು ಲಾಠಿ ಚಾರ್ಜ್ ನಡೆಸಿ ಗುಂಪು ಚದುರಿಸಿದ್ದಾರೆ. ಸದ್ಯ ಉದ್ರಿಕ್ತರ ಗುಂಪು ರಸ್ತೆ ತಡೆ ನಡೆಸಿ ಸ್ಥಳಕ್ಕೆ ಎಸ್‌ಪಿ ಆಗಮಿಸುವಂತೆ ಪಟ್ಟು ಹಿಡಿದಿದ್ದಾರೆ.
ಈ ಬಗ್ಗೆ ಉಡುಪಿ ಎಸ್‌ಪಿ ಡಾ. ಅರುಣ್ ಕುಮಾರ್ ಮಾತನಾಡಿದ್ದು, ಮಲ್ಪೆ ಪೊಲೀಸ್ ಠಾಣಾ ಅಪರಾಧ ಕ್ರಮಾಂಕ 124/2023, ಕಲಂ 307, 302, 449, 324 ಐಪಿಸಿ ಪ್ರಕರಣದಲ್ಲಿ ಸಂಜೆ 4.45ರ ಹೊತ್ತಿಗೆ ಘಟನೆ ನಡೆದ ಸ್ಥಳದಲ್ಲಿ ಆರೋಪಿ ತೋರಿಸಿಕೊಟ್ಟ ಸ್ಥಳ ಮಹಜರು ಮಾಡಲು ಆರೋಪಿಯನ್ನು ಕರೆದುಕೊಂಡು ಬಂದ ಸಮಯದಲ್ಲಿ, ಮೃತರ ಸಂಬಂಧಿಗಳು ಹಾಗೂ ಸ್ನೇಹಿತರು ಆರೋಪಿ ವಿರುದ್ದ ಫೋಷಣೆ ಕೂಗಿದ್ದಾರೆ. ಮಹಜರು ಮುಗಿಸಿ ವಾಪಸ್ ಹೊರಡುವ ಸಮಯದಲ್ಲಿ ವಾಹನ ತಡೆದು ನಿಲ್ಲಿಸುವ ಪ್ರಯತ್ನ ಮಾಡಿದ್ದಾರೆ. ಈ ಸಮಯ ಲಘು ಲಾಠಿ ಪ್ರಹಾರ ಮಾಡಿ ಜನರನ್ನು ಚದುರಿಸಿ ಆರೋಪಿಯನ್ನು ಸುರಕ್ಷಿತ ಸ್ಥಳಕ್ಕೆ ಕರೆದೊಯ್ಯಲಾಯಿತು. ಪ್ರಸ್ತುತ ಪರಿಸ್ಥಿತಿ ಶಾಂತವಾಗಿರುತ್ತದೆ. ಈ ಬಗ್ಗೆ ಆ ಸಮುದಾಯದ ಹಿರಿಯರೊಂದಿಗೆ ಚರ್ಚಿಸಿ ಶಾಂತಿ ಕಾಪಾಡುವಂತೆ ಮನವಿ ಮಾಡಲಾಗಿದೆ ಎಂದು ತಿಳಿಸಿದರು.
ಏನಿದು ಪ್ರಕರಣ?: ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆಗೈದಿರುವ ಘಟನೆ ಉಡುಪಿ ಜಿಲ್ಲೆಯ ನೇಜಾರುವಿನ ತೃಪ್ತಿನಗರ ಎಂಬಲ್ಲಿ ಭಾನುವಾರ (ನ.12) ನಡೆದಿತ್ತು. ಮನೆಗೆ ನುಗ್ಗಿ ತಾಯಿ ಮತ್ತು ಮೂವರು ಮಕ್ಕಳನ್ನು ದುಷ್ಕರ್ಮಿಗಳು ಚೂರಿಯಿಂದ ಇರಿದು ಹತ್ಯೆಗೈದಿದ್ದರು. ಈ ವೇಳೆ ವೃದ್ಧೆಯೊಬ್ಬರು ಗಂಭೀರ ಗಾಯಗೊಂಡಿದ್ದು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹಸೀನಾ (46), ಅಫ್ನಾನ್ (23), ಅಯ್ನಾಝ್ (21), ಆಸಿಂ (12) ಕೊಲೆಯಾದವರು. ಈ ಮನೆಯ ಯಜಮಾನ ವಿದೇಶದಲ್ಲಿ ಉದ್ಯೋಗದಲ್ಲಿದ್ದಾರೆ. ದೀಪಾವಳಿ ಹಬ್ಬದ ದಿನ ಹತ್ಯೆ ನಡೆದಿರುವುದನ್ನು ಕಂಡು ಗ್ರಾಮಸ್ಥರು ಬೆಚ್ಚಿಬಿದ್ದಿದ್ದರು. ಸದ್ಯ ಈ ಬಗ್ಗೆ ಉಡುಪಿ ಪೊಲೀಸರು ಎಲ್ಲಾ ಆಯಾಮದಲ್ಲೂ ತನಿಖೆ ನಡೆಸುತ್ತಿದ್ದಾರೆ.
ಇದನ್ನೂ ಓದಿ: ಉಡುಪಿ: ನಾಲ್ವರ ಕೊಲೆ ಪ್ರಕರಣ, ಶಂಕಿತ ಆರೋಪಿ ಕರೆದೊಯ್ದ ಬಗ್ಗೆ ಆಟೋ ಚಾಲಕ ಹೇಳಿದ್ದೇನು?