ಉಡುಪಿ: ಉಡುಪಿಯಲ್ಲಿ ಕೊರೊನಾ ಸೋಂಕಿತ ವ್ಯಕ್ತಿ ಮೃತಪಟ್ಟ ಪ್ರಕರಣಕ್ಕೆ ಸಂಬಂಧಪಟ್ಟಂತೆ ಜಿಲ್ಲಾಧಿಕಾರಿ ಜಗದೀಶ್ ಅಧಿಕೃತ ಹೇಳಿಕೆ ನೀಡಿದ್ದಾರೆ.
ಮುಂಬೈನಿಂದ ಬಂದಿದ್ದ ವ್ಯಕ್ತಿ ಕುಂದಾಪುರದಲ್ಲಿ ಕ್ವಾರಂಟೈನ್ ಆಗಿದ್ದರು. ಅವರಿಗೆ ತೀವ್ರ ಎದೆನೋವು ಕಾಣಿಸಿಕೊಂಡ ಹಿನ್ನೆಲೆ, ಕುಂದಾಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಅವರ ಪರಿಸ್ಥಿತಿ ಗಂಭೀರವಾಗಿದ್ದ ಕಾರಣ ಅವರನ್ನ ಮಣಿಪಾಲ ಆಸ್ಪತ್ರೆಗೆ ವರ್ಗಾಯಿಸಿದ್ದು, ವೈದ್ಯರು ಚಿಕಿತ್ಸೆ ನೀಡಿದ್ದರು. ಆದರೆ, ಅವರು ಚಿಕಿತ್ಸೆಗೆ ಸ್ಪಂದಿಸದೆ ಹೃದಯಾಘಾತದಿಂದ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ.
ಆಸ್ಪತ್ರೆಗೆ ದಾಖಲಿಸುವಾಗ ಅವರಿಗೆ ತೀವ್ರ ಉಸಿರಾಟದ ತೊಂದರೆಯಿತ್ತು. ಹೀಗಾಗಿ ಅವರನ್ನ ಕೋವಿಡ್ ಪರೀಕ್ಷೆಗೆ ಒಳಪಡಿಸಲಾಗಿದ್ದು,ವರದಿಯಲ್ಲಿ ಅವರಿಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಆಸ್ಪತ್ರೆಯಲ್ಲಿ ಅವರಿಗೆ ಚಿಕಿತ್ಸೆ ನೀಡಿದ ವೈದ್ಯರು ಸುರಕ್ಷತಾ ಕ್ರಮಗಳನ್ನು ಅನುಸರಿಸಿದ್ದರು. ಕುಂದಾಪುರದಲ್ಲಿ ಕೂಡ ವೈದ್ಯರು ಪಿಪಿಇ ಕಿಟ್ ಅಳವಡಿಸಿಕೊಂಡೇ ಚಿಕಿತ್ಸೆ ನೀಡಿದ್ದು, ಮೂವರು ವೈದ್ಯಕೀಯ ಸಿಬ್ಬಂದಿ ಸುರಕ್ಷತಾ ಕ್ರಮಗಳನ್ನ ಅನುಸರಿಸಿರಲಿಲ್ಲ. ಹೀಗಾಗಿ ಅವರನ್ನ ಪರೀಕ್ಷೆಗೆ ಒಳಪಡಿಸಿ ಕ್ವಾರಂಟೈನ್ ಮಾಡಲಾಗುವುದು.
ಮೃತ ವ್ಯಕ್ತಿ ಸುಮಾರು 57 ಜನರ ಸಂಪರ್ಕ ಹೊಂದಿರುವುದಾಗಿ ತಿಳಿದುಬಂದಿದ್ದು, ಅವರೆಲ್ಲರನ್ನೂ ಪರೀಕ್ಷೆಗೆ ಒಳಪಡಿಸಲಾಗುವುದು. ಮೃತ ವ್ಯಕ್ತಿಯ ಅಂತ್ಯ ಸಂಸ್ಕಾರವನ್ನ ಕೋವಿಡ್ ನಿಯಮಾವಳಿಯಂತೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.