ಉಡುಪಿ: ಹಕ್ಕುಪತ್ರ, ಜೆಟ್ಟಿ ಸಮಸ್ಯೆ, ಮೂಲಭೂತ ಸೌಕರ್ಯ ನೀಡುವಂತೆ ಆಗ್ರಹಿಸಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ ಕೋಡಿಕನ್ಯಾಣ ಗ್ರಾಮಕ್ಕೆ ಉಡುಪಿ ಜಿಲ್ಲಾಧಿಕಾರಿ ಜಿ.ಜಗದೀಶ್ ಭೇಟಿ ನೀಡಿ, ಗ್ರಾಮಸ್ಥರ ಮನವೊಲಿಸಲು ಯತ್ನಿಸಿದರು.
ಅಭಿವೃದ್ಧಿ, ಹಕ್ಕುಪತ್ರ ಸಮಸ್ಯೆಗಳ ಪರಿಹಾರಕ್ಕೆ ಚುನಾವಣೆ ಬಹಿಷ್ಕಾರ ಪರಿಹಾರವಲ್ಲ, ಚುನಾವಣೆ ಬಹಿಷ್ಕರಿಸಿದರೆ ಗ್ರಾಮದ ಅಭಿವೃದ್ಧಿಗೆ ತೊಂದರೆಯಾಗುತ್ತದೆ. ಕೋಡಿ ಗ್ರಾಮದ ಜನತೆಯ ಸಮಸ್ಯೆ ಬಗೆಹರಿಸಲು ಈಗಾಗಲೇ ಜಿಲ್ಲಾಡಳಿತ ಕ್ರಮ ಕೈಗೊಂಡಿದೆ. ಚುನಾವಣಾ ಬಹಿಷ್ಕಾರದ ತಮ್ಮ ನಿಲುವಿನಿಂದ ಹಿಂದೆ ಸರಿಯಬೇಕು ಎಂದು ಗ್ರಾಮಸ್ಥರಿಗೆ ಮನವಿ ಮಾಡಿದರು.
ಗ್ರಾಮಸ್ಥರು ಹಕ್ಕು ಪತ್ರ ಸಮಸ್ಯೆ, ಜೆಟ್ಟಿ ಕಾಮಗಾರಿ ಸ್ಥಗಿತ, ಕೃಷಿಗೆ ಉಪ್ಪು ನೀರಿನ ಸಮಸ್ಯೆ, ಜನಪ್ರತಿನಿಧಿಗಳ, ಅಧಿಕಾರಿಗಳ ಅಸಹಕಾರ ಮುಂತಾದ ಕಾರಣಗಳಿಗಾಗಿ ಚುನಾವಣೆ ಬಹಿಷ್ಕಾರಕ್ಕೆ ಕರೆ ನೀಡಿದ್ದೇವೆ. ಜೆಟ್ಟಿ ಹೊಳೆತ್ತುವ ಕೆಲಸ ಕೋಡಿಕನ್ಯಾಣದಲ್ಲಿ ಇನ್ನೂ ನಡೆದಿಲ್ಲ. ಉಪ್ಪು ನೀರಿನ ತಡೆಗೆ ಸೂಕ್ತ ಕ್ರಮ ಕೈಗೊಳ್ಳದ ಹಿನ್ನೆಲೆ ಪ್ರತಿ ವರ್ಷ ನಮ್ಮ ಕೃಷಿ ಹಾನಿಯಾಗುತ್ತಿದೆ. ಹತ್ತಾರು ವರ್ಷಗಳ ನಮ್ಮ ಸಮಸ್ಯೆಗೆ ಸರ್ಕಾರ ಪೂರಕವಾಗಿ ಸ್ಪಂದನೆ ನೀಡದಿರುವುದರಿಂದ ಈ ಬಾರಿ ಚುನಾವಣೆ ಬಹಿಷ್ಕರಿಸಿದ್ದೇವೆ ಎಂದು ಗ್ರಾಮಸ್ಥರು ಜಿಲ್ಲಾಧಿಕಾರಿಗಳಿಗೆ ತಿಳಿಸಿದರು.
ಸಿ.ಆರ್.ಝಡ್ ನಿಯಮಗಳನ್ನು ಪರಿಶೀಲಿಸಿ ಈಗಾಗಲೇ ಕೆಲವು ಕುಟುಂಬಗಳಿಗೆ ಹಕ್ಕು ಪತ್ರ ನೀಡುವ ಕಾರ್ಯ ಶುರುವಾಗಿದೆ. ಸಮುದ್ರ ತೀರದಲ್ಲಿ ಹೊಸ ಸರ್ವೇ ನಂಬರ್ ಸೃಷ್ಟಿಸುವ ಸಲುವಾಗಿ ಸರ್ವೇ ನಡೆಸಿದ್ದು, ಹೊಸ ನಂಬರ್ ನೀಡಿ ಹಕ್ಕುಪತ್ರ ವಿತರಿಸಲಾಗುತ್ತದೆ. ಕೃಷಿ ಭೂಮಿಗೆ ಹಕ್ಕುಪತ್ರ ನೀಡಲು ಸಿ.ಆರ್.ಝಡ್ನಲ್ಲಿ ಯಾವುದೇ ಸಮಸ್ಯೆ ಇಲ್ಲ, ಈ ಬಗ್ಗೆ ಕ್ರಮ ಕೈಗೊಳ್ಳಲಾಗುವುದು. ಹಕ್ಕು ಪತ್ರಕ್ಕಾಗಿ ಪಾವತಿಸಬೇಕಾದ ಮೊತ್ತವನ್ನು ಕಡಿತಗೊಳಿಸಲು ಸೂಚಿಸಿದ್ದು, ಈ ಬಗ್ಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಜೆಟ್ಟಿ ಸಮಸ್ಯೆಗೆ ಸಂಬಂಧಿಸಿ ತಜ್ಞರೊಂದಿಗೆ ಮಾತುಕತೆ ನಡೆಸಿ ಕ್ರಮ ಕೈಗೊಳ್ಳಲಾಗುವುದು. ಜಿಲ್ಲಾಡಳಿತ ಕೋಡಿ ಗ್ರಾಮದ ಜನರ ಸಮಸ್ಯೆಗೆ ನಿರಂತರವಾಗಿ ಸ್ಪಂದಿಸುವ ಕಾರ್ಯ ಮಾಡುತ್ತದೆ. ಆದ್ದರಿಂದ ಚುನಾವಣೆ ಬಹಿಷ್ಕಾರದ ನಿರ್ಧಾರ ಕೈಬಿಟ್ಟು ಚುನಾವಣೆ ನಡೆಸಲು ಸಹಕರಿಸಿ ಎಂದು ಜಿಲ್ಲಾಧಿಕಾರಿ ತಿಳಿಸಿದರು.