ಉಡುಪಿ: ಮೀನುಗಾರಿಕೆಗೆ ತೆರಳಿ ವಾಪಸು ಬರುವ ವೇಳೆ ದೋಣಿ ಮಗುಚಿ ಇಬ್ಬರು ಮೀನುಗಾರರು ಪ್ರಾಣ ಕಳೆದುಕೊಂಡ ಘಟನೆ ಉಡುಪಿ ಜಿಲ್ಲೆಯ ಬೈಂದೂರು ತಾಲೂಕಿನ ಶಿರೂರು ಕಳಿಹಿತ್ಲು ಎಂಬಲ್ಲಿ ನೆಡೆದಿದೆ. ಭಾನುವಾರ ರಾತ್ರಿ 10 ಗಂಟೆಗೆ ಶಿರೂರು ಕಳುಹಿತ್ಲುವಿನಿಂದ ಮೀನುಗಾರಿಕೆಗೆ ತೆರಳಿದ್ದ ನುಮೈರಾ ಅಂಜುಮ್ IND KA03 MO-4827 ದೋಣಿಯಲ್ಲಿ 3 ಜನ ಮೀನುಗಾರಿಕೆ ನೆಡೆಸುತ್ತಿದ್ದರು. ಮೀನುಗಾರಿಕೆ ನೆಡೆಸಿ ವಾಪಸ್ ಬರುವಾಗ ಸೋಮವಾರ ಮುಂಜಾನೆ ಶಿರೂರು ಕಳಿಹಿತ್ಲು ಅಳಿವೆ ಸಮೀಪ ಅರಬ್ಬಿ ಸಮುದ್ರದಲ್ಲಿ ದೋಣಿ ಮಗುಚಿ ಅದರಲ್ಲಿದ್ದ ಅಬ್ದುಲ್ ಸತ್ತರ್ (45) ಹಡವಿನ ಕೋಣೆ ಶಿರೂರು, ಮಿಸ್ಬಾ ಯುಸೂಫ್ (48) ಕುದ್ವಾಯಿ ರೋಡ್ ಭಟ್ಕಳ ಮೃತಪಟ್ಟಿದ್ದಾರೆ.
ದೋಣಿಯಲ್ಲಿದ್ದ ಮತ್ತೋರ್ವ ಬುಡ್ಡು ಮುಖ್ತಾರ್ ಹಡವಿನಕೋಣೆ ಇವರನ್ನು ಇನ್ನೊಂದು ದೋಣಿಯಲ್ಲಿದ್ದ ಮಾಮ್ಸು ಯಾಕೂಬ್ ಎನ್ನುವವರು ರಕ್ಷಣೆ ಮಾಡಿದ್ದಾರೆ. ಕರಾವಳಿ ಕಾವಲು ಪಡೆ ಹಾಗೂ ಆರಕ್ಷಕ ಸಿಬ್ಬಂದಿಗಳು ಆಗಮಿಸಿದ್ದು, ಬೈಂದೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಭಾಗದಲ್ಲಿ ಕೆಲವೇ ತಿಂಗಳುಗಳ ಹಿಂದೆ ಇಬ್ಬರು ಮೀನುಗಾರರು ಸಮುದ್ರ ಪಾಲಾಗಿದ್ದು, ಈ ವರ್ಷ ಬೈಂದೂರು ಭಾಗದಲ್ಲಿ ಅತ್ಯಧಿಕ ಮೀನುಗಾರಿಕಾ ದುರಂತಗಳು ನಡೆದಿದೆ.
ಹಿಂದಿನ ಪ್ರಕರಣಗಳು, ಬಲೆಗೆ ಸಿಲುಕಿ ಮೀನುಗಾರ ಮೃತ: ಈ ಹಿಂದೆ ಕಾಪು ಸಮೀಪದ ಲೈಟ್ ಹೌಸ್ ಬಳಿ ನಡೆದ ದುರ್ಘಟನೆಯಲ್ಲಿ ಬಲೆಗೆ ಸಿಲುಕಿ ಮೀನುಗಾರ ಸಮುದ್ರಕ್ಕೆ ಬಿದ್ದು ಮೃತಪಟ್ಟಿದ್ದ. ಸಾಂಪ್ರದಾಯಿಕ ಮೀನುಗಾರಿಕೆಗೆ ತೆರಳಿದ್ದ ಆತ, ಮೀನುಗಾರಿಕೆಯಲ್ಲಿ ನಿರತರಾಗಿದ್ದ ವೇಳೆ ಬಲೆಯೊಳಗೆ ಸಿಲುಕಿ ಸಮುದ್ರಕ್ಕೆ ಬಿದ್ದಿದ್ದ.
ಮೀನುಗಾರರ ರಕ್ಷಣೆ: ಬೋಟ್ ಇಂಜಿನ್ ಹಾಳಾದ ಕಾರಣ ಅರಬ್ಬಿ ಸಮುದ್ರದಲ್ಲಿ ಕೆಲ ದಿನಗಳಿಂದ ಅಪಾಯದಲ್ಲಿದ್ದ 26 ಮೀನುಗಾರರು ಹಾಗೂ ಬೋಟ್ ಅನ್ನು ಕೋಸ್ಟ್ ಗಾರ್ಡ್ ಸಿಬ್ಬಂದಿ ಪತ್ತೆ ಮಾಡಿ ರಕ್ಷಣೆ ಮಾಡಿದ್ದ ಘಟನೆ ಇತ್ತೀಚೆಗೆ ಕಾರವಾರದಲ್ಲಿ ನಡೆದಿತ್ತು.
ಗೋವಾದ ಪಣಜಿ ಮೂಲದ ಕ್ರಿಸ್ಟೋ ರೇ ಹೆಸರಿನ ಮೀನುಗಾರಿಕಾ ಬೋಟು ಮೀನುಗಾರಿಕೆಗೆ ತೆರಳಿತ್ತು. ಇಂಜಿನ್‌ನಲ್ಲಿ ಸಮಸ್ಯೆಯಾಗಿ ದಾರಿ ತಪ್ಪಿದ್ದರಿಂದ ಮೀನುಗಾರಿಕಾ ಬೋಟ್ ಅಪಾಯದಲ್ಲಿದ್ದು, 4 ದಿನ ಸಮುದ್ರದಲ್ಲೇ ಕಾಲ ಕಳೆದಿದ್ದರು. ಕೊನೆಗೆ ಸ್ಯಾಟಲೈಟ್ ಫೋನ್ ಮೂಲಕ ಮಾಲೀಕರನ್ನು ಸಂಪರ್ಕಿಸಿ ಕೋಸ್ಟ್ ಗಾರ್ಡ್ ನೆರವು ಕೋರಿದ್ದರು. ಬೋಟಿನ ಲೊಕೇಶನ್ ಪತ್ತೆಹಚ್ಚಿ ಮೀನುಗಾರರನ್ನು ಸಂಪರ್ಕಿಸಿದ ಕೋಸ್ಟ್ ಗಾರ್ಡ್ ಸಿಬ್ಬಂದಿ ಸ್ಥಳೀಯ ಮೀನುಗಾರರ ನೆರವಿನಿಂದ ಎಲ್ಲರ ರಕ್ಷಣೆ ಮಾಡಿದ್ದರು.
ಇದನ್ನೂ ಓದಿ: ಪಶ್ಚಿಮ ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಬಂದರಿನಲ್ಲಿ ಶೇ.50 ರಷ್ಟು ಬೋಟ್ಗಳ ಲಂಗರು