ಉಡುಪಿ: ರಾಜಕಾರಣಿಯೊಬ್ಬರ ಗನ್‌ಮ್ಯಾನ್ ಇಡೀ ಕುಟುಂಬಕ್ಕೆ ಕೊರೊನಾ ತಟ್ಟಿದೆ. ರಾಜಕಾರಣಿಯೊಬ್ಬರ ಗನ್‌ಮ್ಯಾನ್ ಸೇರಿದಂತೆ ಆತನ ಇಡೀ ಕುಟುಂಬದ ಎಂಟು ಮಂದಿಗೆ ಪಾಸಿಟಿವ್ ಬಂದಿದೆ.
ಕೋಟ ಹೋಬಳಿಯ ಹಿಲಿಯಾಣದಲ್ಲಿ ವಾಸವಾಗಿರುವ ಕುಟುಂಬದಲ್ಲಿ ಶೀತ ಜ್ವರಕ್ಕಾಗಿ ಗನ್‌ಮ್ಯಾನ್ ಅವರನ್ನು ಮೊದಲು ಪರೀಕ್ಷೆಗೊಳಪಡಿಸಲಾಗಿತ್ತು. ಬಳಿಕ ಮನೆಯವರ ಮಾದರಿಗಳನ್ನು ಸಂಗ್ರಹಿಸಲಾಗಿತ್ತು. ಎಲ್ಲರ ವರದಿಯೂ ಪಾಸಿಟಿವ್ ಬಂದಿದೆ. ಈ ಹಿನ್ನೆಲೆಯಲ್ಲಿ ಗನ್ ಮ್ಯಾನ್ ಕುಟುಂಬದ ಮನೆ ಸೀಲ್‌ಡೌನ್ ಮಾಡಲಾಗಿದೆ ಎಂದು ಕೋಟ ಕಂದಾಯ ನಿರೀಕ್ಷಕ ರಾಜು ಅವರು ಮಾಹಿತಿ ನೀಡಿದ್ದಾರೆ.
ಇನ್ನು ಜಿಲ್ಲೆಯಲ್ಲಿ ಕೊರೊನಾಗೆ ಇಬ್ಬರು ಬಲಿಯಾಗಿದ್ದಾರೆ. ಚಾಂತಾರುವಿನ 70 ವರ್ಷದ ಮಹಿಳೆ ಹಾಗೂ ಅಂಪಾರಿನ ವ್ಯಕ್ತಿಯೊಬ್ಬರು ಮೃತಪಟ್ಟಿದ್ದಾರೆ. ಅಸ್ತಮಾ, ಶೀತ-ಜ್ವರದಿಂದ ಕೆಲ ದಿನಗಳಿದಿಂದ ಬಳಲುತಿದ್ದ ಮಹಿಳೆಯ, ಗಂಟಲು ದ್ರವ ಮಾದರಿ ಪರೀಕ್ಷೆಯಲ್ಲಿ ನಿನ್ನೆ ರಾತ್ರಿಯಷ್ಟೇ ಪಾಸಿಟಿವ್ ಬಂದಿತ್ತು. ಆಸ್ಪತ್ರೆಗೆ ಸೇರಿಸಲು ಸಿದ್ಧತೆ ನಡೆಯುತಿದ್ದಂತೆ ಮನೆಯಲ್ಲೇ ಮಹಿಳೆ ಮೃತಪಟ್ಟಿದ್ದಾರೆ.
ಕುಂದಾಪುರ ತಾಲೂಕು ಅಂಪಾರು ನಿವಾಸಿಯೊಬ್ಬರು ಕೊರೊನಾಗೆ ಬಲಿಯಾಗಿದ್ದಾರೆ. ಅನ್ಯ ಖಾಯಿಲೆಯಿಂದ ಬಳಲುತ್ತಿದ್ದ 58 ವರ್ಷ ಪ್ರಾಯದ ಕೋವಿಡ್ ಪೇಶೆಂಟ್, ಉಡುಪಿ ಕೋವಿಡ್ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದರು. ಇದರೊಂದಿಗೆ ಜಿಲ್ಲೆಯಲ್ಲಿ ಕೋವಿಡ್-19 ಗೆ ಮೃತಪಟ್ಟವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಜಿಲ್ಲೆಯಲ್ಲಿ ಒಂದೇ ದಿನ 160 ಕೊರೊನಾ ಪಾಸಿಟಿವ್ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 2,846ಕ್ಕೆ ಏರಿಕೆಯಾಗಿದೆ. ಜಿಲ್ಲೆಯಲ್ಲಿ ಸದ್ಯ 994 ಸಕ್ರಿಯ ಪ್ರಕರಣಗಳು ಇದ್ದು, ನಿನ್ನೆ 65 ಮಂದಿ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಜಿಲ್ಲೆಯಲ್ಲಿ ಈವರೆಗೆ ಒಟ್ಟು 1841 ಮಂದಿ ಡಿಸ್ಜಾರ್ಜ್ ಆಗಿದ್ದಾರೆ ಎಂದು ಡಿಎಚ್ ಒ ಸುಧೀರ್ ಚಂದ್ರ ಸೂಡ ಮಾಹಿತಿ ನೀಡಿದ್ದಾರೆ.