ಉಡುಪಿ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉಡುಪಿ ಶ್ರೀಕೃಷ್ಣ ಮಠವನ್ನು ಧಾರ್ಮಿಕ ದತ್ತಿ ಇಲಾಖೆಗೆ ಸೇರಿಸುವ ವಿಷಯ ಗೊತ್ತಾದಾಗ ನಾನೇ ಸಿದ್ದರಾಮಯ್ಯ ಬಳಿಗೆ ಹೋಗಿ, ಮಠವನ್ನು ವಶಪಡಿಸಿಕೊಂಡರೆ ಮೊದಲಿಗೆ ನಾನೇ ರಾಜೀನಾಮೆ ನೀಡುತ್ತೇನೆ ಎಂದು ಹೇಳಿದ್ದೆ ಎಂದು ಹೇಳುವ ಮೂಲಕ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ಮತ್ತು ನಾಯಕರಿಗೆ ಮತ್ತೊಮ್ಮೆ ಇರಿಸುಮುರಿಸು ಉಂಟು ಮಾಡಿದ್ದಾರೆ.
ಕೃಷ್ಣಮಠದ ರಾಜಾಂಗಣದಲ್ಲಿ ಅದಮಾರು ಪರ್ಯಾಯ ಸಮಾಪನ ಪ್ರಯುಕ್ತ ನಡೆಯುತ್ತಿರುವ 'ವಿಶ್ವಾರ್ಪಣಂ' ಕಾರ್ಯಕ್ರಮದಲ್ಲಿ ಭಾಗವಹಿಸಿ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಮಾತನಾಡಿದರು. ಮಧ್ವಾಚಾರ್ಯರು ಪ್ರತಿಷ್ಠಾಪಿಸಿದ ಮಠಕ್ಕೆ 800 ವರ್ಷಗಳ ಇತಿಹಾಸ ಇದೆ. ದೇಶವಿದೇಶಗಳಲ್ಲಿ ಭಕ್ತರನ್ನು ಹೊಂದಿರುವ ಮಠ, ಉಡುಪಿ ಜನರಿಗೊಂದು ಭಾಗ್ಯ. ಆದರೆ ನಮ್ಮದೇ ಸರ್ಕಾರ ಇದನ್ನು ಸ್ವಾಧೀನಪಡಿಸಿಕೊಳ್ಳಲು ಮುಂದಾಗಿತ್ತು. ಆಗ ನಾನು ಮಠವನ್ನು ಮುಟ್ಟಿದರೆ ರಾಜೀನಾಮೆ ನೀಡುತ್ತೇನೆ ಎಂದು ಸಿದ್ದರಾಮಯ್ಯನವರಿಗೆ ಹೇಳಿದ್ದೆ ಎಂದು ಸ್ಮರಿಸಿದರು.
ಕೃಷ್ಣ ಮಠ ಕುರಿತು ಮಧ್ವರಾಜ್ ಹೇಳಿಕೆ : ಈ ವಿಷಯ ನನ್ನ ಒಳಗೇ ಇತ್ತು. ಇದನ್ನು ಹೇಳುವುದಿಲ್ಲ ಎಂದುಕೊಂಡಿದ್ದೆ. ಆದರೆ ಇವತ್ತು ಹೇಳಬೇಕಾಯಿತು ಎಂದು ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. ಅಂದಹಾಗೆ ಪ್ರಮೋದ್, ಕಳೆದೆರಡು ವರ್ಷಗಳಿಂದ ಪಕ್ಷದ ಜೊತೆ ಅಂತರ ಕಾಯ್ದುಕೊಳ್ಳುತ್ತಿದ್ದು, ಬಿಜೆಪಿ ಬಾಗಿಲಲ್ಲಿ ನಿಂತಿದ್ದಾರೆ.