ಉಡುಪಿ: ನಾಳೆ ಭಾರತ ಅಪರೂಪದ ಸೂರ್ಯ ಗ್ರಹಣಕ್ಕೆ ಸಾಕ್ಷಿಯಾಗಲಿದೆ. ರಾಜಸ್ಥಾನ, ಹರಿಯಾಣ, ಉತ್ತರಾಖಂಡ್ ರಾಜ್ಯಗಳ ಕೆಲ ಪ್ರದೇಶಗಳಲ್ಲಿ ಸೂರ್ಯ ಗ್ರಹಣವಾಗಲಿದ್ದು, ದೇಶದ ಉಳಿದ ಎಲ್ಲಾ ಪ್ರದೇಶಗಳಲ್ಲಿ ಪಾರ್ಶ್ವ ಸೂರ್ಯ ಗ್ರಹಣ ಆಗಲಿದೆ.
ಕುರುಕ್ಷೇತ್ರ, ಡೆಹ್ರಾಡೂನ್ಗಳ ಸುಮಾರು 21 ಕಿ.ಮೀ.ಗಳಲ್ಲಿ ಸಂಪೂರ್ಣ ಕಂಕಣ ಗ್ರಹಣವಾದರೆ, ಅಲ್ಲಿಂದ ದಕ್ಷಿಣಕ್ಕೆ ವ್ಯಾಪಿಸುತ್ತಿದ್ದಂತೆ ಪಾರ್ಶ್ವ ಸೂರ್ಯ ಗ್ರಹಣವಾಗಲಿದೆ. ಅದರಲ್ಲೂ ಗ್ರಹಣವಾಗುವ ಅಂಶ ಕಡಿಮೆಯಾಗುತ್ತಾ, ಉಡುಪಿಯಲ್ಲಿ ಪಾರ್ಶ್ವ ಸೂರ್ಯ ಗ್ರಹಣ 40 ಅಂಶವಾಗಲಿದೆ ಎಂದು ಉಡುಪಿಯ ಭೌತ ವಿಜ್ಞಾನಿ ಡಾ. ಎ.ಪಿ.ಭಟ್ ಮಾಹಿತಿ ನೀಡಿದ್ದಾರೆ.
ಉಡುಪಿಯಲ್ಲಿ ಬೆಳಿಗ್ಗೆ 10 ಗಂಟೆ 04 ನಿಮಿಷಕ್ಕೆ ಗ್ರಹಣ ಪ್ರಾರಂಭವಾಗಲಿದ್ದು, ಮದ್ಯಾಹ್ನ 1 ಗಂಟೆ 22 ನಿಮಿಷಕ್ಕೆ ಮುಕ್ತಾಯವಾಗಲಿದೆ. 11 ಗಂಟೆ 37 ನಿಮಿಷ ಹೆಚ್ಚು, ಅಂದ್ರೆ 40% ಸೂರ್ಯ ಮರೆಯಾಗಿ ನಂತರ ಕಡಿಮೆಯಾಗಲಿದೆ ಎಂದು ಅವರು ತಿಳಿಸಿದ್ದಾರೆ.
ಕಳೆದ ಡಿಸೆಂಬರ್ 26ರ ಕಂಕಣ ಸೂರ್ಯ ಗ್ರಹಣ ಹಾಗೂ ನಾಳೆಯ ಗ್ರಹಣ ಶತಮಾನಕ್ಕೊಮ್ಮೆ ಬರುವಂತಹುದು. ಹತ್ತು ವರ್ಷಗಳಿಗೊಮ್ಮೆ ಪಾರ್ಶ್ವ ಸೂರ್ಯಗ್ರಹಣ ಸಂಭವಿಸಿದರೆ, ನಮಗಿನ್ನು ಪುನಃ ಕಂಕಣ ಸೂರ್ಯ ಗ್ರಹಣ ಕಾಣುವುದು 2064ಕ್ಕೆ ಎಂದರು.
ಸೂರ್ಯ ಹಾಗೂ ಭೂಮಿಯ ನಡುವೆ ಚಂದ್ರ ನೇರವಾಗಿ ಬಂದಾಗ ಸೂರ್ಯ ಗ್ರಹಣವಾಗುತ್ತದೆ. ಅದು ಕೆಲವೇ ಪ್ರದೇಶಗಳಲ್ಲಿ ಖಗ್ರಾಸ ಅಥವಾ ಕಂಕಣವಾಗಬಹುದು. ಚಂದ್ರ ಭೂಮಿಗಿಂತ ಸುಮಾರು 20 ಪಟ್ಟು ಚಿಕ್ಕದಾಗಿರುವುದರಿಂದ ಸೂರ್ಯ ಗ್ರಹಣ ಹೆಚ್ಚೆಂದರೆ 7.5 ನಿಮಿಷ ಮಾತ್ರ ಇರುತ್ತದೆ ಎಂದು ಮಾಹಿತಿ ನೀಡಿದರು.
ಚಂದ್ರ ಗ್ರಹಣವನ್ನು ನೇರ ಬರಿಗಣ್ಣಿನಿಂದ ನೋಡಬಹುದು. ಆದರೆ ಸೂರ್ಯ ಗ್ರಹಣವನ್ನು ಬರಿಗಣ್ಣಿನಿಂದ ನೋಡಲೇಬಾರದು. ಗ್ರಹಣ ಸಂಬಂಧ ತಯಾರಿಸಿದ ಕನ್ನಡಕದಿಂದ ಅಥವಾ ಪಿನ್ ಹೋಲ್ ಉಪಕರಣಗಳಿಂದ ಪರೋಕ್ಷವಾಗಿ ನೋಡಬಹುದು ಎಂದು ಅವರು ಹೇಳಿದರು.
ಮಳೆ, ಮೋಡ ಇಲ್ಲದಿದ್ದರೆ ಉಡುಪಿ ಪೂರ್ಣಪ್ರಜ್ಞ ಹವ್ಯಾಸಿ ಖಗೋಳ ವೀಕ್ಷಕರ ಸಂಘದ ವತಿಯಿಂದ ಅದರ ವೆಬ್ಸೈಟ್ನಲ್ಲಿ ನೇರ ಪ್ರಸಾರದಲ್ಲಿ ಗ್ರಹಣ ವೀಕ್ಷಣೆ ಇರುತ್ತದೆ. ತಾವು ಮನೆಯಲ್ಲೇ ಕುಳಿತು ಗ್ರಹಣ ವೀಕ್ಷಣೆ ಮಾಡಬಹುದು ಎಂದು ಅವರು ತಿಳಿಸಿದರು.