ಉಡುಪಿ: ಪೇಜಾವರ ಶ್ರೀಗಳು ಕಾಫಿ ಕುರಿತು ಪ್ರವಚನ ಮಾಡಿದ್ದಾರೆ. ಕೃಷ್ಣಮಠದಲ್ಲಿ ಪರ್ಯಾಯ ಪಲಿಮಾರು ಸ್ವಾಮೀಜಿ ಆಯೋಜಿಸಿದ್ದ ದೇಶಿ ಗೋವು ಸಮ್ಮೇಳನಲ್ಲಿ ಶ್ರೀಗಳು ಕಾಫಿ ಆರೋಗ್ಯಕ್ಕೆ ಹೇಗೆ ಮಾರಕ ಎಂಬುದರ ಕುರಿತು ವಿವರಿಸುವ ಮೂಲಕ ಕಾಫಿ ಪ್ರಿಯರಿಗೆ ಮಾತಿನೇಟು ಸಹ ಕೊಟ್ಟಿದ್ದಾರೆ.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಪೇಜಾವರ ಶ್ರೀ, ಹಸುವಿನ ಹಾಲು ಅದರ ಶ್ರೇಷ್ಠತೆ ಬಗ್ಗೆ ಮಾತನಾಡುತ್ತಾ ಕಾಫಿ ಕಪ್ ಎತ್ತಿಕೊಂಡರು. ಈ ಮೂಲಕ ಕಾಫಿ ಪ್ರಿಯರಿಗೆ ಕೆಲ ಬುದ್ಧಿ ಮಾತು ಹೇಳಿದರು. ಕಾಪಿ ಶಬ್ದ ಸೃಷ್ಟಿಯಾದ ಬಗ್ಗೆ ಹಾಸ್ಯ ಚಟಾಕಿ ಹಾರಿಸಿದ ಸ್ವಾಮೀಜಿ, ಕಾ ಅಂದ್ರೆ ಕಾಲಕೂಟ ಪಿ ಅಂದ್ರೆ ಪಿಯೂಷ. ಕಾಲಕೂಟ ಅಂದ್ರೆ ವಿಷ. ಪಿಯೂಷ ಅಂದ್ರೆ ಅಮೃತ. ಅಮೃತಕ್ಕೆ ಮನುಷ್ಯರು ವಿಷವೆಂಬ ಕಾಫಿ ಪುಡಿ ಹಾಕಿ ಸೇವಿಸುತ್ತಾರೆ. ಹಸುವಿನ ಶುದ್ಧ ಹಾಲನ್ನು ನೇರವಾಗಿ ಕುಡಿಯದೆ, ವಿಷಕಾರಿ ಅಂಶ ಬೆರೆಸಿ ಕುಡಿಯುವ ಪ್ರವೃತ್ತಿ ಮನುಷ್ಯನಿಗೆ ಅಂಟಿಕೊಂಡಿರುವುದು ಒಂದು ಚಟ ಎಂದರು.
ಇನ್ನು ಶುಕ್ಲಾಂಬರದರಂ ವಿಷ್ಣುಂ ಶಶಿವರ್ಣಂ ಚತುರ್ಭಜಂ ಪ್ರಸನ್ನ ವದನಂ ಧ್ಯಾಯೇತ್ ಸರ್ವ ವಿಘ್ನೋಪ ಶಾಂತಯೇ ಶ್ಲೋಕವನ್ನು ಮಾತಿಗೆತ್ತಿಕೊಂಡ ಪೇಜಾವರಶ್ರೀ, ಮತ್ತೆ ಕಾಫಿ ಕುಡಿಯುವವರ ಕಾಲೆಳೆದರು. ಕಾಫಿ ವಿಷ್ಣುವಿಂತೆ ವಿಶ್ವದೆಲ್ಲೆಡೆ ವ್ಯಾಪಿಸಿದೆ. ಶುಕ್ಲಾಂ ಅಂದ್ರೆ ಹಾಲು, ಕಾಫಿ ಪುಡಿ ಸೇರಿದರೆ ಹಾಲು ಚಂದ್ರನ ಬಣ್ಣವಾಗಿ ಬದಲಾಗುತ್ತದೆ. ಕಾಫಿ ಕೊಡುವ ಎರಡು ಕೈ ಕಾಫಿ ತೆಗೆದುಕೊಳ್ಳುವ ಎರಡು ಕೈ ಸೇರಿದರೆ ಚತುರ್ಭಜ ಆಗುತ್ತದೆ ಎಂದು ನಗೆ ಚಟಾಕಿ ಹಾರಿಸಿದರು.
ಶ್ಲೋಕದ ಕಡೆಯಲ್ಲಿ ಬರುವ ಸರ್ವ ವಿಘ್ನೋಪ ಶಾಂತಯೇ ಎಂಬಂತೆ ಮನುಷ್ಯನ ಆರೋಗ್ಯ ಶಾಂತವಾಗಿ ಇರುವುದಿಲ್ಲ. ಬದಲಾಗಿ ಕಾಫಿ ಕುಡಿದು ಅನಾರೋಗ್ಯವನ್ನು ತರಿಸಿಕೊಳ್ಳುತ್ತೇವೆ. ಭಾರತದ ದೇಶಿ ದನದ ಹಾಲು ಕುಡಿದ್ರೆ ಆರೋಗ್ಯ, ಮನಸ್ಸು ಎರಡೂ ಚೆನ್ನಾಗಿರುತ್ತದೆ. ಮನುಷ್ಯ ವಿಕೃತಿ ಮಾಡುತ್ತಾ ಹೋದರೆ ಸಮಸ್ಯೆ ಖಂಡಿತ ಎದುರಾಗುತ್ತೆ ಎಂದು ಪೇಜಾವರ ಶ್ರೀಗಳು ಹೇಳಿದರು.