ಉಡುಪಿ: ದೈವದ ಪಾತ್ರಿಯ ವೇಷ ಧರಿಸಿ ವ್ಯಕ್ತಿವೋರ್ವ ಗಣೇಶೋತ್ಸವ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು ಎನ್ನುವುದು ಈಗ ಜಿಲ್ಲೆಯಲ್ಲಿ ವಿವಾದಕ್ಕೆ ಎಡೆಮಾಡಿಕೊಟ್ಟಿದೆ.
ಕಾರ್ಕಳ ತಾಲೂಕು ಮುಂಡ್ಕೂರು ದುರ್ಗಾಪರಮೇಶ್ವರಿ ದೇವಸ್ಥಾನದಲ್ಲಿ ಸಾರ್ವಜನಿಕ ಗಣೇಶೋತ್ಸವವನ್ನು ಪ್ರತಿವರ್ಷ ಆಚರಿಸಲಾಗುತ್ತದೆ. ಗಣಪತಿ ಮೂರ್ತಿ ನಿಮಜ್ಜನ ವೇಳೆ ವೈಭವದ ಶೋಭಾಯಾತ್ರೆ ನಡೆಯುತ್ತದೆ. ಈ ಮೆರವಣಿಗೆಯಲ್ಲಿ ಟ್ಯಾಬ್ಲೋ, ವಿವಿಧ ವೇಷಧಾರಿಗಳು ಸಹ ಇರುತ್ತಾರೆ.
ಅಂತೆಯೇ ಈ ಬಾರಿ ಸ್ಥಳೀಯ ಶರತ್ ಎಂಬವರು ದೈವದ ಪಾತ್ರಿಯ ವೇಷ ಹಾಕಿದ್ದಾರೆ. ಆವೇಷ ಬಂದವರಂತೆ ನಟಿಸಿ, ದೈವದ ನುಡಿ ಕೊಡುವವರಂತೆ ಮಾತನಾಡಿ ಸ್ಥಳದಲ್ಲಿದ್ದವರನ್ನು ರಂಜಿಸಿದ್ರು ಎನ್ನಲಾಗ್ತಿದೆ. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಭೂತಾರಾಧನೆಯಲ್ಲಿ ದೈವಪಾತ್ರಿಗೆ ಮಹತ್ವದ ಸ್ಥಾನವಿದೆ. ಈ ರೀತಿ ಅಣಕು ಮಾಡಿರುವುದರಿಂದ ಹಿಂದೂ ಧಾರ್ಮಿಕತೆಗೆ ಧಕ್ಕೆ ಬರುತ್ತದೆ ಎಂದು ಭಕ್ತರಿಂದ ಆಕ್ರೋಶ ವ್ಯಕ್ತವಾಗಿದೆ. ಶ್ರೀರಾಮಸೇನೆ ಮತ್ತು ಹಿಂದೂ ಜಾಗರಣಾ ವೇದಿಕೆ ಪ್ರಮುಖರು ವೇಷಧಾರಿ ಶರತ್ಗೆ ಕರೆಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ. ದೈವಪಾತ್ರಿಯ ವೇಷಧಾರಿ ಶರತ್ ಕೊನೆಗೆ ಕ್ಷಮೆ ಕೇಳಿದ್ದಾರೆ ಎಂದು ತಿಳಿದುಬಂದಿದೆ.
ಮೆರವಣಿಗೆ, ಶೋಭಾಯಾತ್ರೆ, ಸಾಂಸ್ಕೃತಿಕ ಕಾರ್ಯಕ್ರಮಗಳ ಸಂದರ್ಭ ದೈವ, ದೇವರನ್ನು ವೇದಿಕೆಗೆ, ರಸ್ತೆಗೆ ತರಬಾರದೆಂದು ನಾಲ್ಕೈದು ವರ್ಷಗಳ ಹಿಂದೆ ಕರಾವಳಿಯಲ್ಲಿ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಇದೀಗ ಮತ್ತೆ ಹಳೇ ಚಾಳಿಯನ್ನು ಶುರುಮಾಡಿರುವುದು ಆಸ್ತಿಕರ ಆಕ್ರೋಶಕ್ಕೆ ಗುರಿಯಾಗಿದೆ. ಕೋಟ್ಯಂತರ ಜನರ ನಂಬಿಕೆಯನ್ನು ಅಣಕು ಮಾಡಬಾರದು ಎಂಬ ಆಗ್ರಹ ಕೇಳಿಬಂದಿದೆ.