ಉಡುಪಿ: ಜಿಲ್ಲೆಯಲ್ಲಿ 5.02 ಪಾಸಿಟಿವಿಟಿ ರೇಟ್ ಇದೆ. ಕೇವಲ ಪಾಯಿಂಟ್ ಜೀರೊ ಟು ಹೆಚ್ಚು ಇರುವ ಕಾರಣಕ್ಕೆ ಲಾಕ್ಡೌನ್ ಮುಂದುವರಿಸುವುದು ಸರಿಯಲ್ಲ. ಲಾಕ್ಡೌನ್ ಮುಂದುವರೆದರೆ ನಮ್ಮ ಜಿಲ್ಲೆಯ ಜನರಿಗೆ ಕಷ್ಟವಾಗುತ್ತದೆ. ಬಟ್ಟೆ, ಮೊಬೈಲ್, ಗ್ಯಾರೇಜ್, ಫ್ಯಾನ್ಸಿ ಮಳಿಗೆ ತೆರೆಯಲು ಬಹಳ ಬೇಡಿಕೆ ಇದೆ. ಸೋಮವಾರ ಮತ್ತೆ ಸಭೆ ಮಾಡಿ ಉಸ್ತುವಾರಿ ಸಚಿವರಿಗೆ ವಿನಂತಿ ಮಾಡುತ್ತೇವೆ. ಅನ್ಲಾಕ್ ಮಾಡದಿದ್ದರೆ ಸರ್ಕಾರದ ಮೇಲೆ ಜನರು ಬೇಸರಗೊಳ್ಳುತ್ತಾರೆ. ಜನರು ಸಂಕಷ್ಟದಲ್ಲಿದ್ದು, ದಂಗೆ ಏಳುವ ಅಪಾಯವಿದೆ ಎಂದು ಶಾಸಕ ರಘುಪತಿ ಭಟ್ ಹೇಳಿದರು.
ಓದಿ: ಬಾಂಗ್ಲಾ ಯುವತಿ ಅತ್ಯಾಚಾರ ಪ್ರಕರಣ: ಹುಡುಗಿಯರೊಂದಿಗೆ ಅರೆನಗ್ನ ಡಾನ್ಸ್ ವಿಡಿಯೋ ಪತ್ತೆ!
ಶೇ. 40 ಪಾಸಿಟಿವಿಟಿಯಿಂದ ಶೇ 5ಕ್ಕೆ ಇಳಿಕೆ ಕಂಡಿದೆ. ಜನರ ತ್ಯಾಗದಿಂದ ಈ ಸಾಧನೆ ಸಾಧ್ಯವಾಗಿದ್ದು, ಸಣ್ಣ ವ್ಯಾಪಾರಸ್ಥರು ತೀವ್ರ ಆರ್ಥಿಕ ಸಂಕಷ್ಟಕ್ಕೆ ಒಳಗಾಗಿದ್ದಾರೆ. ಹೋಟೆಲ್, ಗೂಡಂಗಡಿ, ಸಲೂನ್ ನವರು ಸಮಸ್ಯೆಯಲ್ಲಿದ್ದಾರೆ. ಪುಸ್ತಕದಂಗಡಿ, ಬ್ಯೂಟಿ ಪಾರ್ಲರ್ ತೆಗೆಯಬೇಕೆಂಬ ಒತ್ತಾಯವಿದೆ.
ಧಾರ್ಮಿಕ, ಸಾಮಾಜಿಕ ಸಭೆಯ ಹೊರತುಪಡಿಸಿ ಇತರ ಚಟುವಟಿಕೆಗಳಿಗೆ ಅವಕಾಶ ನೀಡಿ. ಸಾಮಾಜಿಕ ಅಂತರ, ಸ್ಯಾನಿಟೈಸರ್, ಮಾಸ್ಕ್ ಬಳಕೆ ಕಡ್ಡಾಯ ಮಾಡಿ ಅನ್ಲಾಕ್ ಮಾಡಿ. ಸಂಜೆಯವರೆಗೂ ವಹಿವಾಟು ನಡೆಸಲು ಅವಕಾಶ ನೀಡಿ ಎಂದು ಮುಖ್ಯಮಂತ್ರಿ, ಉಸ್ತುವಾರಿ ಸಚಿವ ಬೊಮ್ಮಾಯಿ ಮತ್ತು ಆರೋಗ್ಯ ಸಚಿವರಿಗೆ ರಘುಪತಿ ಭಟ್ ಒತ್ತಾಯಿಸಿದ್ದಾರೆ.
ಬಿಜೆಪಿ ಹೈಕಮಾಂಡ್ ಸಭೆಯಲ್ಲಿ ನಾಯಕತ್ವದ ಬಗ್ಗೆ ಚರ್ಚೆ ಆಗಿಲ್ಲ:
ಬಿಜೆಪಿ ಹೈಕಮಾಂಡ್ ಅರುಣ್ ಸಿಂಗ್ ಬೆಂಗಳೂರು ಭೇಟಿ ವಿಚಾರದ ಬಗ್ಗೆ ಮಾಧ್ಯಮಗಳಲ್ಲಿ ವಿಶೇಷತೆ ಕಲ್ಪಿಸಲಾಗಿದೆ. ಆದರೆ ಸಭೆಯಲ್ಲಿ ನಾಯಕತ್ವ ಬದಲಾವಣೆ ಚರ್ಚೆಯೇ ಆಗಿಲ್ಲ ಎಂದು ಶಾಸಕ ಭಟ್ ಹೇಳಿದರು. ಶಾಸಕರಾಗಿ ನಮ್ಮ ಅಭಿಪ್ರಾಯ ಹೇಳಲು ನಾಯಕರು ಅವಕಾಶ ನೀಡಿದ್ದಾರೆ.
ಶಾಸಕರಿಗೆ ಕೇಂದ್ರ-ರಾಜ್ಯ ಸರ್ಕಾರದಿಂದ ಮತ್ತು ಪಕ್ಷದಿಂದ ಏನು ಸಹಕಾರವಾಗಬೇಕು ಎಂದು ಕೇಳಿದ್ದಾರೆ. ಪಕ್ಷದ ಹೈಕಮಾಂಡ್ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚರ್ಚೆಗೆ ಅವಕಾಶ ನೀಡಿರುವುದು ಸ್ವಾಗತಾರ್ಹ ಎಂದರು. ಯಡಿಯೂರಪ್ಪನವರ ನಾಯಕತ್ವ ಬೇಕು ಅಥವಾ ಬೇಡ ಎಂಬ ಬಗ್ಗೆ ಎಂಬ ಪ್ರಶ್ನೆಯೇ ಉದ್ಭವವಾಗಿಲ್ಲ. ಶಾಸಕರ ಅಭಿಪ್ರಾಯಗಳೇನೇ ಇದ್ದರೂ ಮಾಧ್ಯಮಗಳ ಮುಂದೆ ಹೇಳದೆ ಪಕ್ಷದ ಮುಂದೆ ಹೇಳಿಕೊಳ್ಳಬೇಕು ಎಂದು ಅರುಣ್ ಸಿಂಗ್ ಹೇಳಿದ್ದಾರೆ.
ಎರಡು ಮೂರು ಮಂದಿ ನಾಯಕರು ಪಕ್ಷದ ನಿಯಮವನ್ನು ಮೀರಿ ಮಾತನಾಡಿರಬಹುದು. ಇದನ್ನು ಯಾರು ಒಪ್ಪುವಂಥದ್ದಲ್ಲ, ಮೊನ್ನೆ ಸಭೆ ಬಹಳ ವಿಶೇಷದ್ದು ಎಂದು ನನಗೆ ಅನ್ನಿಸಿಲ್ಲ ಎಂದರು.