ಉಡುಪಿ: ಶಿವಮೊಗ್ಗದಲ್ಲಿ ಗೋರಕ್ಷಕರ ಮೇಲೆ ವಾಹನ ದಾಳಿ ಪ್ರಕರಣದಲ್ಲಿ ಗಾಯಗೊಂಡು ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಗಾಯಾಳುಗಳ ಆರೋಗ್ಯ ಕ್ಷೇಮ ವಿಚಾರಿಸಿದ ಸಚಿವ ಕೆ.ಎಸ್.ಈಶ್ವರಪ್ಪ ಬಳಿಕ, ಮಾಧ್ಯಮದವರೊಂದಿಗೆ ಮಾತನಾಡಿದರು.
'ಯಾವುದೇ ಪ್ರಾಣಾಪಾಯವಿಲ್ಲ ಎಂದು ವೈದ್ಯರು ಹೇಳಿದ್ದಾರೆ. ಸಂಘಟನೆ ಮತ್ತು ಸರ್ಕಾರ ಗಾಯಾಳುಗಳಿಗೆ ನೆರವು ನೀಡುತ್ತದೆ. ಕುಟುಂಬದಿಂದ ಗಾಯಾಳುಗಳಿಗೆ ಒಂದು ಪೈಸೆಯೂ ಖರ್ಚಾಗದಂತೆ ನೋಡಿಕೊಳ್ಳುತ್ತೇವೆ' ಎಂದರು.
'ಗೋವು ಹಂತಕರಿಗೆ ಭಯ ಹುಟ್ಟಿಸಲು ಕಾನೂನು ಜಾರಿಗೆ ತಂದಿದ್ದೇವೆ. ನಾವು ಜಾರಿಗೆ ತಂದ ಶಾಸನ ಭಯ ಹುಟ್ಟಿಸಲು ಸಮರ್ಥವಾಗಿದೆ. ಪೊಲೀಸ್ ಇಲಾಖೆ ಇನ್ನಷ್ಟು ಬಿಗಿಯಾಗಬೇಕು. ಪೊಲೀಸ್ ಇಲಾಖೆಗೆ ಧೈರ್ಯ ತುಂಬುವ ಕೆಲಸ ಮಾಡುತ್ತೇವೆ. ಕಾಯ್ದೆ ಗಟ್ಟಿ ಇಲ್ಲ ಎಂದಾದರೆ ಮತ್ತೆ ಬಿಗಿಗೊಳಿಸುತ್ತೇವೆ. ಬಿಜೆಪಿಗರು ಗೋವನ್ನು ತಾಯಿ ಸಮಾನವಾಗಿ ನೋಡುತ್ತಾರೆ' ಎಂದರು.
'ಪ್ರವಾಸ ಒತ್ತಡದ ನಡುವೆ ಆಸ್ಪತ್ರೆಗೆ ಭೇಟಿ ಕೊಟ್ಟಿದ್ದೇನೆ. ಇಬ್ಬರು ಆರೋಪಿಗಳ ಬಂಧನವಾಗಿದೆ. 19 ಹಸುಗಳ ರಕ್ಷಣೆಯಾಗಿದೆ. ಅಕ್ರಮ ಮುಂದುವರಿಸಿದರೆ ನಾವು ಅಂಥವರನ್ನು ಬಲಿ ತೆಗೆದುಕೊಳ್ಳುತ್ತೇವೆ' ಎಂದು ಸಚಿವ ಕೆ.ಎಸ್ ಈಶ್ವರಪ್ಪ ಹೇಳಿದರು.
'ಸಚಿವನಾಗಿ ನನಗೆ ಈಗಲೂ ಪೊಲೀಸ್ ಇಲಾಖೆ ಬಿಗಿ ಕ್ರಮ ಕೈಗೊಳ್ಳದ ಬಗ್ಗೆ ಅಸಮಾಧಾನ ಇದೆ. ಹೆಂಡತಿ-ಮಕ್ಕಳಿಗೆ ಏನಾದರೂ ಮಾಡಿದ್ರೆ ಎಂಬ ಭಯ ಅವರನ್ನು ಕಾಡುತ್ತಿದೆ. ಬಿಜೆಪಿ ಸರ್ಕಾರ ಬಂದರೂ ಗೋಹತ್ಯೆ ನಿಂತಿಲ್ಲ. ಇದನ್ನೆಲ್ಲ ನೋಡುವಾಗ ನನಗೆ ಹೊಟ್ಟೆ ಉರಿಯುತ್ತಿದೆ. ಪೂರ್ಣ ಗೋಹತ್ಯೆ ನಿಲ್ಲಿಸಲು ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ. ಗೋಹತ್ಯೆ ಮಾಡುವವರಿಗೆ ಬಲೆ ಹಾಕುತ್ತೇವೆ ಮತ್ತು ಬಲಿ ತೆಗೆದುಕೊಳ್ಳುತ್ತೇವೆ' ಎಂದು ಸಚಿವರು ಹೇಳಿದರು.
'ನಾನು ಸಿಎಂ ಆಗಲ್ಲ. ಸಂಘಟನೆ ನನ್ನನ್ನು ಡಿಸಿಎಂ ಮಾಡಿತ್ತು. ಸಂಘಟನೆ ನನ್ನನ್ನು ಏನು ಮಾಡುತ್ತೋ ಅದು ಆಗುತ್ತೇನೆ. ಬಾಗಲಕೋಟೆಯಲ್ಲಿ ನಿರಾಣಿ ಬಗ್ಗೆ ಮಾತನಾಡಿದ್ದು ನಿಜ. ನಿರಾಣಿ ಸಣ್ಣ ಉದ್ದಿಮೆ ಆರಂಭಿಸಿ ದೊಡ್ಡ ಉದ್ಯಮಿಯಾದವರು. ಮುಂದೆ ಅವಕಾಶ ಸಿಕ್ಕರೆ ಸಿಎಂ ಆಗಬಹುದು ಎಂದಿದ್ದೆ. ಬಸವರಾಜ ಬೊಮ್ಮಾಯಿ ಬದಲಾವಣೆಯಾಗುತ್ತದೆ ಎಂದು ನಾನು ಹೇಳಿಲ್ಲ' ಎಂದು ಸ್ಪಷ್ಟಪಡಿಸಿದರು.