ಉಡುಪಿ: ಮನೆಯೊಳಗೆ ಅಕ್ವೇರಿಯಂ ಇಟ್ಟು ಬಣ್ಣ ಬಣ್ಣದ ಮೀನು ಸಾಕೋದು ಸಾಮಾನ್ಯ. ಆದ್ರೆ ಇಲ್ಲೊಬ್ಬರು ಮತ್ಸ್ಯ ಪ್ರೇಮಿ ತಮ್ಮ ಮನೆಯ ಬಾವಿಯನ್ನೇ ಅಕ್ವೇರಿಯಂ ಮಾಡಿಕೊಂಡು ಹಲವು ಜಾತಿಯ ಬಣ್ಣ ಬಣ್ಣದ ಮೀನುಗಳನ್ನು ಸಾಕಿ ಹೊಸ ಮತ್ಸ್ಯಲೋಕವನ್ನೇ ಸೃಷ್ಟಿಸಿದ್ದಾರೆ.
ಮನೆ, ಹೋಟೆಲ್, ಮಾಲ್ಗಳಲ್ಲಿ ಆಕರ್ಷಕ ಅಕ್ವೇರಿಯಂಗಳನ್ನು ನೋಡಿದ್ದೇವೆ. ಮನಸ್ಸಿಗೆ ಮುದ ನೀಡುವ ವಿವಿಧ ಜಾತಿಯ ಮೀನುಗಳನ್ನು ಖರೀದಿ ಮಾಡಿ ಮನೆಯ ಅಕ್ವೇರಿಯಂಗಳಲ್ಲಿ ಸಾಕುವ ಹವ್ಯಾಸ ಈಗ ಜನಪ್ರಿಯವಾಗುತ್ತಿದೆ. ಆದರೆ ಉಡುಪಿ ಜಿಲ್ಲೆಯ ಉದ್ಯಾವರದ ನಿವಾಸಿ ಮಹಮ್ಮದ್ ರಫೀಕ್ ಸಾಬ್ಜನ್ ತಮ್ಮ ಮನೆಯ ಬಾವಿಯನ್ನೇ ಓಪನ್ ಅಕ್ವೇರಿಯಂ ಆಗಿ ಪರಿವರ್ತಿಸಿದ್ದಾರೆ.
ರಫೀಕ್ ತಮ್ಮ ಮೊಮ್ಮಗಳು ಇಷ್ಟ ಪಟ್ಟಳು ಎಂದು ಮನೆಯ ಅಕ್ವೇರಿಯಂನಲ್ಲಿ ಚಿಕ್ಕ ಮೀನುಗಳನ್ನು ತಂದು ಹಾಕಿದ್ರಂತೆ. ಎಲ್ಲರಿಗೂ ಅಚ್ಚು-ಮೆಚ್ಚಿನ ಈ ಮೀನುಗಳು ದೊಡ್ಡದಾಗಿ ಬೆಳೆದು ಅಕ್ವೇರಿಯಂ ಒಳಗೆ ಓಡಾಟಕ್ಕೆ ಕಷ್ಟವಾದಾಗ ಆಗ ಬಂದಿದ್ದು, ಮೀನುಗಳನ್ನು ಬಾವಿಯಲ್ಲಿ ಸಾಕುವ ಉಪಾಯ. ಇದೀಗ ಬಾವಿಯಲ್ಲಿ ನೂರಾರು ವಿವಿಧ ಜಾತಿಯ ಬಣ್ಣ ಬಣ್ಣದ ಮೀನುಗಳು ಸ್ವಚ್ಛಂದವಾಗಿ ಓಡಾಡಿಕೊಂಡಿವೆ. ಕೆಲವೊಂದಿಷ್ಟು ಮೀನುಗಳು ಮರಿಯನ್ನು ಕೂಡಾ ಹಾಕಿವೆ. ಬಾವಿ ಅಕ್ವೇರಿಯಂ ನೋಡಲು ಹಲವಾರು ಮಂದಿಗೆ ಇಲ್ಲಿಗೆ ಭೇಟಿ ನೀಡುತ್ತಿದ್ದಾರೆ.
ಆಹಾರ ಹಾಕುವ ಸಂದರ್ಭದಲ್ಲಿ ರಫೀಕ್ ಸಾಹೇಬ್ರು ಚಪ್ಪಾಳೆ ಹೊಡೆದ್ರೆ ಬಾವಿಯ ಆಳದಿಂದ ಮೀನುಗಳು ಮೇಲೆದ್ದು ಬಂದು ಮಾಲಕನ ಕರೆಗೆ ಸ್ಪಂದಿಸುತ್ತವೆ. ಹೀಗೆ ಮೀನು ಮತ್ತು ರಫೀಕ್ ನಡುವೆ ಭಾವನಾತ್ಮಕ ನಂಟು ಇರುವುದು ಕಂಡುಬರುತ್ತದೆ.