ಉಡುಪಿ: ವಯಸ್ಸಾದ ಒಂಟಿ ಮಹಿಳೆಯರು, ಪುರುಷರನ್ನು ಗುರಿಯಾಗಿಸಿಕೊಂಡು ಅವರಿಂದ ಚಿನ್ನಾಭರಣ ದೋಚುತ್ತಿದ್ದ ಇರಾನಿ ಗ್ಯಾಂಗ್‌ನ ನಾಲ್ವರು ಅಂತರ್‌ರಾಜ್ಯ ಕಳ್ಳರನ್ನು ಉಡುಪಿ ಪೊಲೀಸರು ಬಂಧಿಸಿದ್ದಾರೆ. ಬಂಧಿತರಿಂದ 7 ಲಕ್ಷ ರೂ. ಮೌಲ್ಯದ ಚಿನ್ನಾಭರಣ ವಶಕ್ಕೆ ಪಡೆಯಲಾಗಿದೆ.
ಮಹಾರಾಷ್ಟ್ರದ ಅಹ್ಮದ್‌ನಗರ ಜಿಲ್ಲೆಯ ಶ್ರೀರಾಮಪುರ ನಿವಾಸಿಗಳಾದ ಜಾಕೀರ್ ಹುಸೇನ್ (26), ಕಂಬರ್ ರಹೀಂ ಮಿರ್ಜಾ (32), ಅಕ್ಷಯ್ ಸಂಜಯ್ ಗೋಸಾವಿ (22) ಮತ್ತು ಶಾಹರುಖ್ ಬಂದೆನವಾಜ್ ಶೇಖ್ (24) ಬಂಧಿತರು.
ಉಡುಪಿಯ ಕೃಷ್ಣಮಠದ ಪಾರ್ಕಿಂಗ್ ಸ್ಥಳದ ಬಳಿ ಅ. 14ರಂದು ಉಡುಪಿ ಡಿಸಿಐಬಿ ಪೊಲೀಸ್ ಇನ್ಸ್‌ಪೆಕ್ಟರ್ ಮಂಜಪ್ಪ ಡಿ.ಆರ್ ಅವರು ಖಚಿತ ಮಾಹಿತಿ ಮೇರೆಗೆ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಇವರಿಂದ 12 ಗ್ರಾಂ ಚಿನ್ನದ ಚೈನ್, ಚಾವರ್‌ಲೆಟ್ ಬೀಟ್ ಕಾರು ಮತ್ತು ಹೊಂಡಾ ಶೈನ್ ಬೈಕ್ ಹಾಗೂ 2 ಹೆಲ್ಮೆಟ್, 5,100 ರೂ. ನಗದು ಜಪ್ತಿ ಮಾಡಲಾಗಿದೆ.
ಬಂಧಿತರು ದಿಲ್ಲಿ, ಮಹಾರಾಷ್ಟ್ರ ಹಾಗೂ ಕರ್ನಾಟಕದ ವಿವಿಧ ಜಿಲ್ಲೆಗಳಲ್ಲಿ ವಯಸ್ಸಾದ ಒಂಟಿ ಮಹಿಳೆಯರು ಅಥವಾ ಗಂಡಸರನ್ನು ಟಾರ್ಗೆಟ್ ಮಾಡುತ್ತಾರೆ. ರಸ್ತೆಯಲ್ಲಿ ಹೋಗುವ ಸಾರ್ವಜನಿಕರನ್ನು ಕರೆದು, ನಾವು ಪೊಲೀಸರು. ಮುಂದೆ ಗಲಾಟೆ ನಡೆದಿದೆ. ಚಿನ್ನಾಭರಣವನ್ನು ನಿಮ್ಮ ಬ್ಯಾಗ್‌ನಲ್ಲಿ ಹಾಕಿಕೊಂಡು ಹೋಗಿ ಎಂದು ಅವರಲ್ಲಿದ್ದ ಚಿನ್ನಾಭರಣ ತೆಗೆದು ಬ್ಯಾಗ್‌ನಲ್ಲಿ ಹಾಕಿಕೊಡುವುದಾಗಿ ನಂಬಿಸಿ, ಅವರಿಗೆ ತಿಳಿಯದಂತೆ ಲಪಟಾಯಿಸಿ ಈ ವಂಚಕರು ಎಸ್ಕೇಪ್ ಆಗುತ್ತಿದ್ದರು.
ಇವರು ಚಿನ್ನಾಭರಣಗಳನ್ನು ಮಾರಾಟ ಮಾಡಿದ್ದ ಮಹಾರಾಷ್ಟ್ರದ ಅಹ್ಮದ್ ನಗರದ ಶ್ರೀರಾಮ್‌ಪುರ ಎಂಬಲ್ಲಿನ ಚಿನ್ನದ ಅಂಗಡಿಯಿಂದ 65 ಗ್ರಾಂ ಚಿನ್ನ ಸ್ವಾಧೀನಪಡಿಸಿಕೊಳ್ಳಲಾಗಿದೆ. ಆರೋಪಿಗಳಿಂದ ವಶಕ್ಕೆ ಪಡೆದ ಸ್ವತ್ತುಗಳ ಒಟ್ಟು ಮೌಲ್ಯ 7 ಲಕ್ಷ ರೂ. ಆಗಬಹುದೆಂದು ಅಂದಾಜಿಸಲಾಗಿದೆ.
ಆರೋಪಿಗಳು ನಡೆಸಿದ ಕೃತ್ಯಗಳಲ್ಲಿ ಉಡುಪಿ ನಗರ -1, ಕುಂದಾಪುರ -1, ವಿಜಯಪುರ- 4, ಚಿಕ್ಕಮಗಳೂರು- 1, ಬಂಟ್ವಾಳ- 1, ಮಂಗಳೂರು ಉರ್ವಾ ಪೊಲೀಸ್ ಠಾಣೆಯಲ್ಲಿ- 1 ಪ್ರಕರಣ ದಾಖಲಾಗಿದೆ. ಇನ್ನೂ ಹಲವು ಕಡೆಗಳಲ್ಲಿ ಇದೇ ರೀತಿಯ ಕೃತ್ಯಗಳನ್ನು ನಡೆಸಿದ್ದಾರೆ ಎಂದು ತನಿಖೆ ವೇಳೆ ತಿಳಿದು ಬಂದಿದೆ.