ಉಡುಪಿ: ಹ್ಯೂಸ್ಟನ್ನಲ್ಲಿ ನಡೆಯುವ ಹೌಡಿ ಮೋದಿ ಕಾರ್ಯಕ್ರಮ ಒಂದು ಅದ್ಬುತ ಯೋಚನೆ. ಈ ಕಾರ್ಯಕ್ರಮದಲ್ಲಿ ಟ್ರಂಪ್ ಭಾಗಿಯಾಗ್ತಿರೋದು ನಮ್ಮ ದೇಶಕ್ಕೆ ಸಂದ ಗೌರವ ಅಂತ ಕೇಂದ್ರ ರಸಗೊಬ್ಬರ ಸಚಿವ ಡಿವಿ.ಸದಾನಂದ ಗೌಡ ತಿಳಿಸಿದ್ದಾರೆ.
ಜಿಲ್ಲೆಯ ಮಣಿಪಾಲದಲ್ಲಿರುವ ಕಂಟ್ರಿ ಇನ್ ಹೋಟೆಲ್ನಲ್ಲಿ ಬಿಜೆಪಿಯಿಂದ ನಡೆದ ರಾಷ್ಟ್ರೀಯ ಏಕತಾ ಅಭಿಯಾನದಲ್ಲಿ ಒಂದು ದೇಶ ಒಂದು ಸಂವಿಧಾನ ಸಂವಾದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿವಿಎಸ್, ಹೌಡಿ ಮೋದಿ ಕಾರ್ಯಕ್ರಮದ ಮೂಲಕ ಚೀನಾಕ್ಕೆ ಈಗಾಗಲೇ ಢವ ಢವ ಆರಂಭವಾಗಿದೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಸಿಕ್ಸರ್ ಬದಲು ಬೋಲ್ಡ್ ಆಗೋದು ಗ್ಯಾರೆಂಟಿ. ಈ ಸಮಾವೇಶದಿಂದ ಭಾರತ ಮುಂಚೂಣಿ ರಾಷ್ಟ್ರ ಎಂಬ ಸಂದೇಶ ಪ್ರಪಂಚಕ್ಕೆ ಹೋಗುತ್ತೆ ಎಂದರು.
ದೇಶಕ್ಕೆ ಆರ್ಥಿಕ ಶಿಸ್ತು ತರುವ ಕೆಲಸ ಮೋದಿಯಿಂದ ಆಗುತ್ತಿದೆ. ಆರ್ಥಿಕ ಕುಸಿತ ಆಗಿದೆ ನಿಜ, ಕಠಿಣ ನಿರ್ಧಾರ ಆದಾಗ ಈ ರೀತಿಯ ಬೆಳವಣಿಗೆ ಸಹಜ ಎಂದು ಡಿವಿಎಸ್ ಹೇಳಿದರು. ನಿನ್ನೆಯ ಆರ್ಥಿಕ ಸುಧಾರಣಾ ಘೋಷಣೆಯಿಂದ ಸೂಚ್ಯಂಕ ಮತ್ತೆ ಮೇಲಕ್ಕೇರಿದೆ. ಮತ್ತೆ ಆರ್ಥಿಕ ಪರಿಸ್ಥಿತಿ ಸಹಜತೆಗೆ ಮರಳಲಿದೆ. ದೇಶದ ಅಖಂಡತೆಗೆ ಮೋದಿ ಕಠಿಣ ನಿರ್ಧಾರ ಕೈಗೊಂಡಿದ್ದಾರೆ. ಎಂದರು.
ಕಾಶ್ಮೀರ ಅಂತಾರಾಷ್ಟ್ರೀಯ ವಿವಾದ ಅಲ್ಲ ಅದೊಂದು ದೇಶದೊಳಗಿನ ಸಮಸ್ಯೆ ಅನ್ನೋದನ್ನು ರಷ್ಯಾ ಒತ್ತಿ ಹೇಳಿದೆ, ಭಯೋತ್ಪಾದನೆಗೆ ಕಾಶ್ಮೀರ ಸ್ವರ್ಗವಾಗಲು ವಿಶೇಷ ಸ್ಥಾನಮಾನವೇ ಕಾರಣವಾಯ್ತು. ಕಾಶ್ಮೀರಿ ಹಿಂದುಗಳು ಮರಳಿ ಬರಲು ಕೇಂದ್ರ ಸರ್ಕಾರ ವ್ಯವಸ್ಥೆ ಕಲ್ಪಿಸಲಿದೆ. ಪಾಕ್ ಆಕ್ರಮಿತ ಕಾಶ್ಮೀರ ಮರಳಿ ಪಡೆಯಲಾಗುವುದು. ಎಲ್ಲಾ ವಿಚಾರದ ಬಹಿರಂಗ ಚರ್ಚೆ ಸಾಧ್ಯವಿಲ್ಲ, ಈ ಬಗ್ಗೆಯೂ ಕಠಿಣ ನಿರ್ಧಾರ ಕೈಗೊಳ್ಳಲಾಗುತ್ತದೆ ಕಾದುನೋಡಿ ಎಂದು ಡಿ.ವಿ. ಸದಾನಂದಗೌಡ ತಿಳಿಸಿದರು.