ಉಡುಪಿ: ನಿನ್ನೆ ಸುರಿದ ಗಾಳಿ-ಮಳೆಗೆ ಹಿರಿಯ ದೈವ ನರ್ತಕ ಉಡುಪಿಯ ಸಾಧು ಪಾಣಾರ ಅವರ ಮನೆ ಕುಸಿದು ಬಿದ್ದಿದೆ.
ಉಡುಪಿಯ ಅಲೆವೂರು ಗುಡ್ಡೆಯಂಗಡಿಯಲ್ಲಿ ಮನೆಕಟ್ಟಿಕೊಂಡಿರುವ ಸಾಧು ಪಾಣಾರ ಅವರು ಬಡತನದಲ್ಲೇ ಜೀವನ ಸಾಗಿಸುತ್ತಿರುವ ಬಡ ಕಲಾವಿದ. ನಿನ್ನೆ ಸಂಜೆ ಸುರಿದ ಧಾರಾಕಾರ ಮಳೆ-ಗಾಳಿಗೆ ಮನೆಯ ಛಾವಣಿ ಸಂಪೂರ್ಣವಾಗಿ ಹಾರಿ ಹೋಗಿದ್ದು,ಮನೆ ಕುಸಿದಿದೆ. ಅದೃಷ್ಟವಶಾತ್ ಮನೆಯೊಳಗಿದ್ದ ಸಾಧು ಮತ್ತು ಅವರ ಪತ್ನಿಗೆ ಯಾವುದೇ ಅಪಾಯವಾಗಿಲ್ಲ. ಛಾವಣಿ ಸರಿಪಡಿಸಲು ಸುಮಾರು ಎರಡು ಲಕ್ಷ ರೂಪಾಯಿ ಖರ್ಚು ಆಗಲಿದ್ದು, ಇದೀಗ ಸಾಧು ಪಾಣಾರ ಅವರ ಕುಟುಂಬ ಕಂಗಲಾಗಿದೆ.
ಕರಾವಳಿಯಲ್ಲಿ ಫೆಬ್ರವರಿಯಿಂದ ಮೇ ತಿಂಗಳವರೆಗೆ ದೈವಗಳ ನೇಮೋತ್ಸವ ನಡೆಯುತ್ತದೆ. ದೈವ ನರ್ತಕರು ಈ ಅವಧಿಯಲ್ಲಿ ದುಡಿದ ಸಂಪಾದನೆಯಲ್ಲೇ ಇಡೀ ವರ್ಷ ಕಳೆಯುತ್ತಾರೆ. ಈ ವರ್ಷ ಇದೇ ಅವಧಿಯಲ್ಲಿ ಕೊರೊನಾ ವಕ್ಕರಿಸಿ ಎಲ್ಲಾ ನೇಮೋತ್ಸವಗಳು ರದ್ದಾಗಿದ್ದು, ಕಲಾವಿದರು ಕಂಗಾಲಾಗಿದ್ದಾರೆ.