ಉಡುಪಿ: ಕಳೆದ ರಾತ್ರಿ ಜಿಲ್ಲಾದ್ಯಂತ ಗುಡುಗು ಸಿಡಿಲು ಸಹಿತ ಸುರಿದ ಭಾರಿ ಮಳೆಗೆ ಹಲವೆಡೆ ಆಸ್ತಿಪಾಸ್ತಿ ಹಾನಿಯಾಗಿದೆ.
ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತದಿಂದಾಗಿ ಉಡುಪಿ ಜಿಲ್ಲಾದ್ಯಂತ ಕಳೆದ ರಾತ್ರಿ ಭಾರಿ ಮಳೆ ಸುರಿದಿದೆ. ಜಿಲ್ಲೆಯ ಬ್ರಹ್ಮಾವರ ತಾಲೂಕಿನ ಮಟಪಾಡಿ ಎಂಬಲ್ಲಿ ಸ್ಟಾಲಿನ್ ಸಿಕ್ವೇರಾ ಎಂಬುವವರ ಮನೆಯ ಬಾವಿಗೆ ಸಿಡಿಲು ಬಡಿದು ಬಾವಿಯ ಆವರಣ ಗೋಡೆ ಛಿದ್ರವಾಗಿದೆ. ಅಷ್ಟೇ ಅಲ್ಲ, ಸಿಡಿಲು ಬಡಿದು ದೊಡ್ಡ ದೊಡ್ಡ ಮರಗಳು ಧರೆಗುರುಳಿದ್ದು, ಸ್ಥಳೀಯ ನೂರಾರು ಮನೆಗಳ ವಿದ್ಯುತ್ ಸಂಚಾರ ವ್ಯತ್ಯಯವಾಗಿದೆ.