ಉಡುಪಿ: ಜಿಲ್ಲಾ ಪ್ರವಾಸದಲ್ಲಿರುವ ಆರೋಗ್ಯ ಸಚಿವ ಡಾ.ಸುಧಾಕರ್, ಜಿಲ್ಲಾ ಸರ್ಕಾರಿ ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಜೊತೆ ಚರ್ಚೆ ನಡೆಸಿ, ನೂತನ ಜಿಲ್ಲಾಸ್ಪತ್ರೆಯ ನಕ್ಷೆ ಪರಿಶೀಲಿಸಿದರು.
ಈ ವೇಳೆ ಮಾತನಾಡಿದ ಅವರು, ನೂತನ ಜಿಲ್ಲಾಸ್ಪತ್ರೆಯ ಟೆಂಡರ್ ಪ್ರಕ್ರಿಯೆ ಮುಗಿದಿದೆ. ಆಗಸ್ಟ್ 15ರ ಒಳಗೆ ನೂತನ ಜಿಲ್ಲಾಸ್ಪತ್ರೆ ಶಂಕುಸ್ಥಾಪನೆ ಮಾಡಲಿದ್ದೇವೆ. ಮುಂದಿನ ಹದಿನೈದು ತಿಂಗಳ ಒಳಗೆ ಆಸ್ಪತ್ರೆ ನಿರ್ಮಾಣವಾಗಲಿದೆ ಎಂದು ಭರವಸೆ ನೀಡಿದರು.
ಜಿಲ್ಲೆಯ ಎಲ್ಲ ಶಾಸಕರು ಮೆಡಿಕಲ್ ಕಾಲೇಜು ನಿರ್ಮಿಸುವಂತೆ ಒತ್ತಡ ಹಾಕುತ್ತಿದ್ದಾರೆ. ರಾಜ್ಯದ 10 ಜಿಲ್ಲೆಗಳಲ್ಲಿ ಮೆಡಿಕಲ್ ಕಾಲೇಜು ಸ್ಥಾಪನೆ ಮಾಡಲಾಗುವುದು. ಖಾಸಗಿ ಸಹಭಾಗಿತ್ವದಲ್ಲಿ ಸರ್ಕಾರಿ ಮೆಡಿಕಲ್ ಕಾಲೇಜು ಸ್ಥಾಪಿಸಲಾಗುವುದು. ಸಿಎಂ 9 ರಿಂದ 10 ಮೆಡಿಕಲ್ ಕಾಲೇಜು ಸ್ಥಾಪಿಸಲು ಸೂಚಿಸಿದ್ದಾರೆ. ಇದಕ್ಕಾಗಿ ಉಡುಪಿಯಲ್ಲಿ 30 ಎಕರೆ ಜಮೀನನ್ನು ಕಾಯ್ದಿರಿಸಲಾಗಿದೆ. ಜಿಲ್ಲೆಯಲ್ಲಿ ಮೂಲ ಸೌಕರ್ಯಗಳು ಸಿದ್ಧವಿದ್ದು, ವೈದ್ಯಕೀಯ ಕಾಲೇಜು ಮಾಡುವುದು ಸುಲಭ ಎಂದರು.
ಕೋವಿಡ್ ತಪಾಸಣೆಯಲ್ಲಿ ನಿರ್ಲಕ್ಷ್ಯ ವಹಿಸಬಾರದು.
ಗಡಿ ಜಿಲ್ಲೆಗಳಲ್ಲಿ ಸೂಕ್ತ ಕೋವಿಡ್ ತಪಾಸಣೆ ನಡೆಸುವಂತೆ ಸಿಎಂ ಈಗಾಗಲೇ ಸೂಚನೆ ನೀಡಿದ್ದಾರೆ. ಈ ಸೂಚನೆ ಗಂಭೀರವಾಗಿ ತೆಗೆದುಕೊಳ್ಳಬೇಕು. ಲಸಿಕೆ ಪಡೆದವರು ಮತ್ತು ಆರ್ಟಿಪಿಸಿಆರ್ ನೆಗೆಟಿವ್ ವರದಿ ಇದ್ದವರನ್ನು ಮಾತ್ರ ರಾಜ್ಯದೊಳಗೆ ಬಿಡಬೇಕು ಎಂದು ಜಿಲ್ಲಾಡಳಿತಕ್ಕೆ ಎಚ್ಚರಿಕೆ ನೀಡಿದರು.
ರಾಜ್ಯಕ್ಕೆ ಮೂರನೇ ಅಲೆ ವ್ಯಾಪಿಸಬಾರದೆಂದರೆ, ಜನರು ಬಿಗಿಯಾದ ಕ್ರಮ ಅನುಸರಿಸಬೇಕು. ಈಗಾಗಲೇ 2.60 ಕೋಟಿ ಜನರಿಗೆ ಲಸಿಕೆ ಹಾಕಿದ್ದೇವೆ. ಇನ್ನೂ 2 ರಿಂದ 3 ಕೋಟಿ ಜನರಿಗೆ ಲಸಿಕೆ ಹಾಕಿದರೆ, ಎಲ್ಲರಿಗೂ ಮೊದಲನೇ ಡೋಸ್ ಪೂರ್ಣವಾಗುತ್ತೆ ಎಂದರು.
ಇದನ್ನೂ ಓದಿ: ದ.ಕ. ಜಿಲ್ಲೆಯಲ್ಲಿ ಭಾರಿ ಮಳೆ- ಜನಜೀವನ ಅಸ್ತವ್ಯಸ್ತ; ಆರೆಂಜ್ ಅಲರ್ಟ್ ಘೋಷಣೆ