ಉಡುಪಿ: ಮಳೆಗಾಲ ಆರಂಭವಾಯ್ತೆಂದರೆ ಸಾಕು ಕಡಲ ತೀರದ ಜನರು ಮಾತ್ರ ದಿಗಿಲುಗೊಳ್ತಾರೆ. ಅಬ್ಬರಿಸುವ ಸಮುದ್ರದಲೆಗಳ ಜತೆ ಅದೆಷ್ಟೋ ಜನರ ಬದುಕೂ ಕೊಚ್ಚಿ ಹೋಗುತ್ತದೆ. ಆದರೆ ಈ ಬಾರಿ ಕಡಲ್ಕೊರೆತ ತಡೆಯಲು ಲಂಬಕೋನದ ‘ಗ್ರೋಯೆನ್ಸ್’ ತಡೆಗೋಡೆ ಹಾಕಲಾಗಿದ್ದು, ಬಹುಕೋಟಿ ವೆಚ್ಚದ ಈ ಗೋಡೆ ಈ ಮಳೆಗಾಲದಲ್ಲಿ ಸತ್ವ ಪರೀಕ್ಷೆಗೆ ಒಳಗಾಗಲಿದೆ.
ವರ್ಷಪ್ರತಿ ನಡೆಯುವ ಕಡಲ ಕೊರೆತವನ್ನು ತಡೆಯುವ ಸಲುವಾಗಿ ಮಟ್ಟು ಬೀಚ್ನಿಂದ ಪಡುಕೆರೆಯವರೆಗೆ ಲಂಬಾಕಾರದ ಕಲ್ಲಿನ ಗೋಡೆಗಳನ್ನು ನಿರ್ಮಿಸಲಾಗಿದೆ. ಈ ವೈಜ್ಞಾನಿಕ ನಿರ್ಮಾಣವನ್ನು ‘ಗ್ರೋಯೆನ್ಸ್ ತಂತ್ರಜ್ಞಾನ’ ಎಂದು ಕರೆಯಲಾಗುತ್ತದೆ. ಚೆನ್ನೈ ಕಡಲತೀರದಲ್ಲಿ ಅಳವಡಿಸಿ ಯಶಸ್ವಿಯಾದ ಈ ತಡೆಗೋಡೆಯನ್ನು ಕರ್ನಾಟಕ ಕರಾವಳಿಯಲ್ಲೂ ನಿರ್ಮಾಣ ಮಾಡಲಾಗಿದೆ. ಮತ್ತಷ್ಟು ಸಮರ್ಪಕವಾಗಿ ಈ ಯೋಜನೆ ರೂಪಿಸಬಹುದಿತ್ತು ಎಂದು ಸ್ಥಳೀಯರಾದ ಪ್ರಭಾಕರ್ ಅಭಿಪ್ರಾಯಪಟ್ಟರು.
ಈವರೆಗೆ ಕಡಲಕೊರೆತಕ್ಕೆ ಸಮಾನಾಂತರ ಮಾದರಿಯ ಕಲ್ಲಿನ ಗೋಡೆ ಹಾಕಲಾಗುತ್ತಿತ್ತು. ಆದರೆ ಇದೇ ಮೊದಲ ಬಾರಿಗೆ ‘ಸೀವಾಕ್’ ಮಾದರಿಯ ಲಂಬಕೋನದ ತಡೆಗೋಡೆ ನಿರ್ಮಿಸಲಾಗಿದೆ. ತಲಾ 120 ಮೀಟರ್ ಅಂತರದಲ್ಲಿ ‘ಐ’ ಆಕಾರದಲ್ಲಿ 35 ದಿಬ್ಬಗಳನ್ನು ನಿರ್ಮಿಸಲಾಗಿದೆ. ಈ ಬ್ರೇಕ್ ವಾಟರ್ ತಂತ್ರಜ್ಞಾನ ಮಳೆಗಾಲದಲ್ಲಿ ಸರಿಯಾದ ರಿಸಲ್ಟ್ ಕೊಡುತ್ತಾ? ಅಥವಾ ಮತ್ತಷ್ಟು ಕಲ್ಲುಗಳನ್ನು ಸಮುದ್ರಕ್ಕೆ ಆಹುತಿ ನೀಡಿದ್ದೇ ಸಾಧನೆಯಾಗುತ್ತಾ? ಎನ್ನುವುದನ್ನು ಕಾದು ನೋಡಬೇಕು ಎಂದು ಕಡಲ ತೀರದ ನಿವಾಸಿ ಪಲ್ಲವಿ ಹೇಳುತ್ತಾರೆ.
ಅಂದಾಜು 78 ಕೋಟಿ ರೂಪಾಯಿ ವೆಚ್ಚದಲ್ಲಿ ಈ ಗ್ರೋಯೆನ್ಸ್ ದಿಬ್ಬ ನಿರ್ಮಾಣವಾಗಿದೆ. ಬೀಚ್ಗಳನ್ನು ಅಭಿವೃದ್ಧಿ ಮಾಡುವ ಉದ್ದೇಶವೂ ಈ ಯೋಜನೆಯಲ್ಲಿದೆ.